ಬೆಂಗಳೂರು: ಪಂಚಾಯತ್ ರಾಜ್ ಸಚಿವಾಲಯ ಬಿಡುಗಡೆ ಮಾಡಿರುವ ಪಂಚಾಯತ್ ರಾಜ್ ವಿಕೇಂದ್ರೀಕರಣದ ಸೂಚ್ಯಂಕದಲ್ಲಿ ಕರ್ನಾಟಕ ಮೊದಲ ಸ್ಥಾನ ಪಡೆದಿದ್ದು, ಸಿಎಂ ಸಿದ್ದರಾಮಯ್ಯ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪೋಸ್ಟ್ ಮಾಡುವ ಮೂಲಕ ಮಾಹಿತಿ ಹಂಚಿಕೊಂಡಿರುವ ಅವರು, ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸನ್ನು ನನಸಾಗಿಸುವತ್ತ ಕರ್ನಾಟಕ ದಾಪುಗಾಲಿರಿಸಿದೆ. ಸ್ಥಳೀಯ ಆಡಳಿತದಲ್ಲಿ ಕರ್ನಾಟಕ ನಂ. 1 ಸ್ಥಾನದಲ್ಲಿದ್ದು, ಹಳ್ಳಿಗಳ ಸಬಲೀಕರಣದ ನಿಟ್ಟಿನಲ್ಲಿ ದೇಶಕ್ಕೆ ಮಾದರಿಯಾಗಿದೆ.
ಪಂಚಾಯತ್ ರಾಜ್ ಸಚಿವಾಲಯ ಬಿಡುಗಡೆ ಮಾಡಿದ ಪಂಚಾಯತ್ ರಾಜ್ ವಿಕೇಂದ್ರಿಕರಣದ ಸೂಚ್ಯಂಕದಲ್ಲಿ ಕರ್ನಾಟಕ ದೇಶದಲ್ಲೇ ನಂ. 1 ಸ್ಥಾನದಲ್ಲಿದೆ. ವಿತ್ತೀಯ ಸ್ವಾಯತ್ತತೆ, ಹೊಣೆಗಾರಿಕೆ ಹಾಗೂ ಬಲಿಷ್ಠ ಗ್ರಾಮ ಸಭೆ ಮತ್ತು ಸಾಮಾಜಿಕ ಲೆಕ್ಕಪರಿಶೋಧನೆಗಳ ಮೂಲಕ ಪಂಚಾಯತ್ ರಾಜ್ ಸಂಸ್ಥೆಗಳನ್ನು ಸಬಲೀಕರಣಗೊಳಿಸುವಲ್ಲಿ ಮತ್ತು ತಳಮಟ್ಟದ ಪ್ರಜಾಪ್ರಭುತ್ವವನ್ನು ಬಲಪಡಿಸುವಲ್ಲಿ ಮಹತ್ವದ ಹೆಜ್ಜೆ ಇರಿಸಿದೆ.
ಸಕಾಲದಲ್ಲಿ ಅನುದಾನ ಬಿಡುಗಡೆ, ಪರಿಣಾಮಕಾರಿಯಾಗಿ 15ನೇ ಹಣಕಾಸು ಆಯೋಗದ ಅನುದಾನ ಬಳಕೆ ಮತ್ತು ಸಾಮಾಜಿಕ ಆಡಿಟ್ ಕ್ಷೇತ್ರದಲ್ಲೂ ಸಹ ಉತ್ತಮ ಸ್ಥಾನ ಪಡೆದಿದೆ ಎಂದು ಹೇಳಿದ್ದಾರೆ.