ಬೆಳ್ತಂಗಡಿ/ ಬೆಂಗಳೂರು : ಧರ್ಮಸ್ಥಳ ಪ್ರಕರಣ ಮತ್ತೆ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಎಸ್.ಐ.ಟಿ ತನಿಖೆ ಪ್ರಗತಿಯಲ್ಲಿದೆ. ತನಿಖೆಯ ಅಧಿಕಾರಿಗಳ ಮೂಲದಿಂದ ಕರ್ನಾಟಕ ನ್ಯೂಸ್ ಬೀಟ್ ಗೆ ಮಹತ್ವದ ಮಾಹಿತಿಯೊಂದು ಲಭ್ಯವಾಗಿದೆ.
ಬೆಂಗಳೂರಿನ ಮಡಿವಾಳದಲ್ಲಿರುವ ಎಫ್ ಎಸ್ ಎಲ್ ಕೇಂದ್ರ ಕಚೇರಿಗೆ ಮತ್ತೆ ಕೆಲವು ಮಾನವ ಅಸ್ಥಿ ಪಂಜರಗಳ ಅವಶೇಷಗಳನ್ನು ಧರ್ಮಸ್ಥಳ ಎಸ್ ಐ ಟಿ ರವಾನೆ ಮಾಡಿದೆ.
ಭೂಮಿಯ ಮೇಲ್ಪದರದಲ್ಲೇ ಅಸ್ಥಿ ಪಂಜರದ ಅವಶೇಷಗಳು ಪತ್ತೆಯಾದ ಹಿನ್ನೆಲೆ ಮ್ಯಾಜಿಸ್ಟ್ರೇಟ್ ಉಪಸ್ಥಿತಿಯ ಅಗತ್ಯವಿರಲಿಲ್ಲ. ಸೌಜನ್ಯಳ ಮಾವ ವಿಟ್ಠಲ್ ಗೌಡ ಬಂಗ್ಲೆಗುಡ್ಡದಿಂದ ತಲೆಬುರುಡೆ ತಂದಿದ್ದರು ಎಂಬ ಮಾಹಿತಿ ನೀಡಿದ್ದ ಗಿರೀಶ್ ಮಟ್ಟಣ್ಣವರ್ ಹೇಳಿಕೆಯನ್ನು ಆಧರಿಸಿ ವಿಟ್ಠಲ್ ಗೌಡರನ್ನು ಬಂಗ್ಲೆಗುಡ್ಡಕ್ಕೆ ಕರೆದೊಯ್ದು ಎಸ್ ಐ ಟಿ ಅಧಿಕಾರಿಗಳು ಮಹಜರು ಪ್ರಕ್ರಿಯೆಯನ್ನು ನಡೆಸಿದ್ದರು.
ಬಂಗ್ಲೆಗುಡ್ಡದಲ್ಲಿ ಭೂಮಿಯ ಮೇಲ್ಪದರದಲ್ಲೇ ರಾಶಿ ರಾಶಿ ಮಾನವ ಅಸ್ಥಿ ಪಂಜರಗಳ ಅವಶೇಷಗಳು ಪತ್ತೆಯಾಗಿತ್ತು, ಇನ್ನಷ್ಟು ಅಸ್ಥಿಪಂಜರಗಳು ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಆದರೇ, ವಿಶೇಷ ತನಿಖಾ ತಂಡ ಅದರ ಪತ್ತೆ ಕಾರ್ಯ ಮಾಡುವುದಕ್ಕೆ ತಾಂತ್ರಿಕ ಸಮಸ್ಯೆಯನ್ನು ಎದುರಿಸುತ್ತಿದೆ ಎನ್ನಲಾಗಿದೆ.
ಬಂಗ್ಲೆಗುಡ್ಡೆಯಲ್ಲಿ ಶವಗಳನ್ನು ಹೂಳಲಾಗಿದೆ ಎಂದು ಯಾರೂ ದೂರು ಅಥವಾ ಸಾಕ್ಷಿ ಹೇಳಿಲ್ಲ. ಮೂಲ ಸಾಕ್ಷಿ ದೂರುದಾರ ಚಿನ್ನಯ್ಯ ಈಗ ಮಾನವ ಅಸ್ಥಿ ಪಂಜರದ ಅವಶೇಷಗಳು ಸಿಕ್ಕಿದ ಜಾಗವನ್ನು ತೋರಿಸಿಲ್ಲ. ಹಾಗಾಗಿ ಆತ ಸೂಚಿಸಿರುವ ಸ್ಥಳಗಳ ಪೈಕಿಯಲ್ಲಿ ಈಗ ಮಾನವ ಅಸ್ಥಿ ಪಂಜರದ ಅವಶೇಷಗಳು ಲಭ್ಯವಾಗಿರುವ ಬಂಗ್ಲೆಗುಡ್ಡ ಎಂಬ ಸ್ಥಳ ಇಲ್ಲ. ಎಸ್.ಐ.ಟಿ ಅಧಿಕಾರಿಗಳಿಗೆ ಬಂಗ್ಲೆಗುಡ್ಡೆಯಲ್ಲಿ ಇನ್ನೂ ಹೆಚ್ಚು ಅಸ್ಥಿ ಪಂಜರದ ಅವಶೇಷಗಳು ಪತ್ತೆಯಾಗಬಹುದು ಎಂಬ ಕುರುಹು ಇದೆ. ಆದರೇ, ಸಾಕ್ಷಿ ಅಥವಾ ದೂರುದಾರರು ಈ ಸ್ಥಳದಲ್ಲಿ ಅಸಹಜ ಸಾವಿಗೀಡಾದ ಶವಗಳನ್ನು ಹೂಳಲಾಗಿದೆ ಎಂದು ಯಾರೂ ದೂರು ನೀಡದ ಕಾರಣ, ಎಸ್.ಐ.ಟಿ ಅಧಿಕಾರಿಗಳಿಗೆ ಉತ್ಖನನ ಪ್ರಕ್ರಿಯೆಗೆ ತಾಂತ್ರಿಕ ಸಮಸ್ಯೆ ಎದುರಾಗಿದೆ ಎನ್ನಲಾಗಿದೆ.
ಯಾವುದೇ ದೂರಿಲ್ಲದೇ ಸ್ಥಳ ಅಗೆದರೆ ಮುಂದೆ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಸಂಕಷ್ಟ ಎದುರಾಗಬಹುದು ಅಥವಾ ಪ್ರಕರಣ ಮತ್ತೊಂದು ತಿರುವು ಪಡೆದುಕೊಳ್ಳುವ ಸಾಧ್ಯತೆ ಇದೆ. ಕೋರ್ಟ್ ಟ್ರಯಲ್ ನಲ್ಲಿ ಸಾಕ್ಷಿಗಳನ್ನು ಕೋರ್ಟ್ ಪರಿಗಣಿಸುವುದಿಲ್ಲ. ಹಾಗಾಗಿ ಇದಕ್ಕೆ ಪರ್ಯಾಯ ಉತ್ತರದ ಹುಡುಕಾಟದಲ್ಲಿದೆ ಎಸ್.ಐ.ಟಿ ಮುಖ್ಯಸ್ಥ ಡಿಜಿಪಿ ಡಾ. ಪ್ರಣವ್ ಮೊಹಂತಿ ನೇತೃತ್ವದ ತಂಡ.
ಸೌಜನ್ಯಳ ಮಾವ ವಿಟ್ಠಲ್ ಗೌಡ ಬಂಧನ ಸಾಧ್ಯತೆ ಬಗ್ಗೆಯೂ ಎಸ್ ಐ ಟಿ ಮೂಲದಿಂದ ಸ್ಪಷ್ಟನೆ ಸಿಕ್ಕಿದ್ದು, ಭೂಮಿ ಉತ್ಖನನ ಮಾಡಿ ತಲೆಬುರುಡೆಯನ್ನು ವಿಟ್ಠಲ್ ಗೌಡ ತಂದಿಲ್ಲ. ಭೂಮಿಯ ಮೇಲ್ಪದರದಲ್ಲಿದ್ದ ತಲೆಬುರುಡೆ ತಂದಿರುವುದರಿಂದ ಕಾನೂನು ಕ್ರಮ ಅಸಾಧ್ಯ ಎಂಬ ಮಾಹಿತಿ ಕರ್ನಾಟಕ ನ್ಯೂಸ್ ಬೀಟ್ ಗೆ ಎಸ್ ಐ ಟಿ ಮತ್ತು ಗೃಹ ಇಲಾಖೆ ಉನ್ನತ ಮೂಲಗಳಿಂದ ಲಭ್ಯವಾಗಿದೆ.
-ಕ್ರೈಂ ಬ್ಯೂರೋ
ಕರ್ನಾಟಕ ನ್ಯೂಸ್ ಬೀಟ್


















