ಧರ್ಮಸ್ಥಳ/ಬೆಂಗಳೂರು : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನನಿತ್ಯ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಎಸ್.ಐ.ಟಿ ತನಿಖೆ ಚುರುಕು ಪಡೆದುಕೊಂಡಿದ್ದು, ವಿವಿಧ ಮಜಲುಗಳಲ್ಲಿ ತನಿಖೆ ನಡೆಸುತ್ತಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತನಿಖೆಯ ಸಂದರ್ಭದಲ್ಲಿ ಸಾಕಷ್ಟು ನಿಗೂಢ ರಹಸ್ಯಗಳು ಬಯಲಾಗಿದ್ದು, ಆ ಮಾಹಿತಿ ಕರ್ನಾಟಕ ನ್ಯೂಸ್ ಬೀಟ್ ಗೆ ಲಭ್ಯವಾಗಿದೆ. ತನಿಖೆಯ ವೇಳೆ ಮಾನವ ಅಸ್ಥಿ ಪಂಜರಗಳ ಇಂಚಿಂಚೂ ರಹಸ್ಯ ಬಯಲಾಗಿದ್ದು, “ಪ್ರಭಾವಿ”ಗಳು ಎಂದು ಹೇಳಲಾಗುತ್ತಿದ್ದವರ ಅಸಲಿ ಮುಖ ಬಟಾಬಯಲಾಗುತ್ತದೆಯೇ ಎಂಬ ಪ್ರಶ್ನೆ ಮತ್ತೆ ಮುಂದೆ ಬಂದಿದೆ.
ಹೌದು, ಬಂಗ್ಲೆ ಗುಡ್ಡದಲ್ಲಿ ಏಳು ಅಸ್ಥಿಪಂಜರಗಳು ಪತ್ತೆಯಾಗಿರುವ ಮಾಹಿತಿ ಲಭ್ಯವಾಗಿದೆ. ಸೌಜನ್ಯಳ ಮಾವ ವಿಠ್ಠಲಗೌಡ ಬುರುಡೆ ತಂದಿದ್ದ ಜಾಗದಲ್ಲಿ ಮಹಜರು ಪ್ರಕ್ರಿಯೆ ವೇಳೆ ಈ ಮೂಳೆಗಳು ಪತ್ತೆಯಾಗಿವೆ. ಒಟ್ಟು 7 ಮಾನವ ಅಸ್ಥಿಪಂಜರಗಳು ಎಸ್.ಐ.ಟಿ ವಶ ಪಡಿಸಿಕೊಂಡಿದೆ. ವಶ ಪಡಿಸಿಕೊಂಡ 2 ಅಸ್ಥಿ ಪಂಜರಗಳು ಎಫ್ ಎಸ್ ಎಲ್ ಗೆ ರವಾನೆ ಮಾಡಲಾಗಿದೆ. ಉಳಿದ ಅಸ್ಥಿಪಂಜರಗಳನ್ನೂ ರವಾನೆ ಮಾಡಲಾಗಿದೆ.
ಬಂಗ್ಲೆ ಗುಡ್ಡದಲ್ಲಿ ಬುಧವಾರ 9 ಅಸ್ಥಿಪಂಜರಗಳು ಪತ್ತೆಯಾಗಿತ್ತು. 5ರ ಪೈಕಿ ಒಂದು ಅಸ್ಥಿಪಂಜರ 10-15 ವರ್ಷ ನಡುವಿನ ಮಗುವಿನದ್ದು ಎನ್ನುವ ಶಂಕೆ ವ್ಯಕ್ತವಾಗಿದೆ. ಪ್ರಕರಣದ ಸಾಕ್ಷಿ ದೂರುದಾರನಾಗಿದ್ದ ಚಿನ್ನಯ್ಯ ಧರ್ಮಸ್ಥಳದ ಸುತ್ತಾ ಮುತ್ತಾ ಚಿಕ್ಕ ಮಕ್ಕಳನ್ನು ಕೊಲೆ ಮಾಡಿ ಹೂಳಲಾಗಿದೆ ಎಂದು ಹೇಳಿಕೆ ಕೊಟ್ಟಿದ್ದ. ಆತನ ಹೇಳಿಕೆಗೂ, ಈಗ ಸಿಕ್ಕಿರುವ ಅಸ್ಥಿ ಪಂಜರಕ್ಕೂ ತಾಳೆ ಹಾಕಿ ನೋಡುವುದಾದರೇ ಪ್ರಕರಣದ ಸುತ್ತ ಅನೇಕ ಸಂಶಯಗಳು ಮೂಡುತ್ತಿವೆ.
ಎಫ್ ಎಸ್ ಎಲ್ ತನಿಖೆಯಲ್ಲಿ ಅಸ್ಥಿ ಪಂಜರ ಮಗುವಿನ ದೇಹವೆನ್ನುವುದು ಪತ್ತೆಯಾದರೆ, ಧರ್ಮಸ್ಥಳದ ಪ್ರಕರಣ ಮತ್ತೆ ಗಂಭೀರ ತಿರುವು ಪಡೆದುಕೊಳ್ಳಬಹುದು ಎನ್ನಲಾಗಿದೆ.
ಮಾತ್ರವಲ್ಲದೇ, ಮಹಜರು ವೇಳೆ ಮಂತ್ರವಾದಿಗಳು ಬಳಸುವ ಕೆಲವು ವಸ್ತುಗಳು ಪತ್ತೆಯಾಗಿವೆ ಎನ್ನುವ ಮಾಹಿತಿಯೂ ಎಸ್ ಐಟಿ ಮೂಲಗಳಿಂದ ಕರ್ನಾಟಕ ನ್ಯೂಸ್ ಬೀಟ್ ಗೆ ಲಭ್ಯವಾಗಿದೆ. ಹಾಗಾದರೇ, ಶ್ರೀ ಕ್ಷೇತ್ರದ ಸುತ್ತಮುತ್ತಾ ಮಾಟಮಂತ್ರ, ವಾಮಾಚಾರ ಪ್ರಯೋಗ ನಡೆಯುತ್ತದೆಯೇ ಎನ್ನುವ ಪ್ರಶ್ನೆಯೂ ಉದ್ಭವಿಸಿದೆ.
ಇನ್ನು, ಪತ್ತೆಯಾಗಿರುವ ವಸ್ತುಗಳು, ಅಸ್ಥಿಪಂಜರಗಳ ಬಗ್ಗೆ ಹೊಸ ಆಯಾಮದಲ್ಲಿ ವಿಶೇಷ ಅಧಿಕಾರವನ್ನು ಎಸ್.ಐ.ಟಿಗೆ ನೀಡಿದರೇ ಬಹುಶ ಪ್ರಕರಣ ಮತ್ತೊಂದು ಮಜಲನ್ನು ಪಡೆಯಬಹುದು.
– ಕ್ರೈಂ ಬ್ಯೂರೋ
ಕರ್ನಾಟಕ ನ್ಯೂಸ್ ಬೀಟ್



















