ಬೆಂಗಳೂರು : ಕೇವಲ ಮನರಂಜನೆಗಾಗಿ ಮಾತ್ರವಲ್ಲದೆ, ಸಾಮಾಜಿಕ ಕಳಕಳಿಯೊಂದಿಗೆ ಕ್ರೀಡಾಕೂಟವೊಂದನ್ನು ಆಯೋಜಿಸಲು ವೇದಿಕೆ ಸಜ್ಜಾಗಿದೆ. ಹೈಪರ್ ಸ್ಪೋರ್ಟ್ಸ್ & ವೆಲ್ಫೇರ್ ಟ್ರಸ್ಟ್ ವತಿಯಿಂದ ಕರ್ನಾಟಕ ಮೀಡಿಯಾ ಚಾಂಪಿಯನ್ ಲೀಗ್-2026 (Media Champion League) ಟೂರ್ನಿಯನ್ನು ಹಮ್ಮಿಕೊಳ್ಳಲಾಗಿದ್ದು, ಮಹಿಳೆಯರ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾದ ‘ಗರ್ಭಾಶಯ ಕ್ಯಾನ್ಸರ್’ (Cervical Cancer) ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಈ ಟೂರ್ನಿ ಹೊಂದಿದೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೈಪರ್ ಸ್ಪೋರ್ಟ್ಸ್ & ವೆಲ್ಫೇರ್ ಟ್ರಸ್ಟ್‌ನ ಮುಖ್ಯಸ್ಥರಾದ ಕಿರಣ್ ಶೆಟ್ಟಿ ಅವರು, ಇದು ಅಂತರ್ ಮಾಧ್ಯಮ ಟೂರ್ನಿಯಾಗಿದೆ. ಈ ಟೂರ್ನಿ ಮೂಲಕ ಗರ್ಭಾಶಯ ಕ್ಯಾನ್ಸರ್ ಬಗ್ಗೆ ಜಾಗೃತಿ ಹಾಗೂ ತಡೆಗಟ್ಟುವುದರ ಬಗ್ಗೆ ಸಮಾಜಮುಖಿ ಸಂದೇಶವನ್ನು ನೀಡಲಾಗುವುದು. ಅಂತರ್ ಮಾಧ್ಯಮ ಟೂರ್ನಿಯನ್ನು 2026ರ ಜನವರಿ ಅಥವಾ ಫೆಬ್ರವರಿಯಲ್ಲಿ ನಡೆಸಲಾಗುವುದು. ತಂಡಗಳ ನೋಂದಣಿ, ವೇಳಾಪಟ್ಟಿ, ಮೈದಾನಗಳ ವಿವರವನ್ನು ಶೀಘ್ರದಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಿದರು.
ಇನ್ನು, ಚಾಂಪಿಯನ್ ತಂಡಕ್ಕೆ 10 ಲಕ್ಷ ರೂಪಾಯಿ ನಗದು ಬಹುಮಾನ, ಹಾಗೆಯೇ ರನ್ನರ್ ಅಪ್ ತಂಡಕ್ಕೆ 5 ಲಕ್ಷ ರೂಪಾಯಿ, ಸೆಮಿಫೈನಲ್ ಪ್ರವೇಶಿಸಿದ ತಂಡಗಳಿಗೆ ತಲಾ 2.5ಲಕ್ಷ ರೂಪಾಯಿ ನೀಡಲಾಗುವುದು. ಈ ಟೂರ್ನಿಯಲ್ಲಿ ಆಡುವ ಮಾಧ್ಯಮ ತಂಡಗಳಿಗೆ ಪ್ರವೇಶ ಉಚಿತ ಎಂದು ಆಯೋಜಕರಾದ ಕಿರಣ್ ಶೆಟ್ಟಿ ತಿಳಿಸಿದರು.

ಇದೇ ವೇಳೆ ಡಾ. ಶಿವಕುಮಾರ್ ಉಪ್ಪಳ ಅವರು ಮಾತನಾಡಿ, ಪ್ರಸ್ತುತ ಭಾರತದಲ್ಲಿ ಮಹಿಳೆಯರನ್ನು ಗರ್ಭಾಶಯ ಕ್ಯಾನ್ಸರ್ ಗಂಭೀರವಾಗಿ ಬಾಧಿಸುತ್ತಿದೆ. ಅರಿವಿನ ಕೊರತೆಯಿಂದಾಗಿ ಅನೇಕರು ಪ್ರಾಣಾಪಾಯಕ್ಕೆ ತುತ್ತಾಗುತ್ತಿದ್ದಾರೆ. ಇದನ್ನು ತಡೆಗಟ್ಟಲು ರೋಗಲಕ್ಷಣಗಳು ಕಾಣಿಸಿಕೊಳ್ಳುವ ಮುನ್ನವೇ ತಪಾಸಣೆ ಮಾಡಿಸುವುದು ಅತ್ಯಗತ್ಯ. ಪ್ರಮುಖವಾಗಿ ಎಚ್‌ಪಿವಿ ಲಸಿಕೆ ಹಾಕಿಸುವ ಮೂಲಕ ಈ ಮಾರಕ ಕಾಯಿಲೆಯನ್ನು ತಡೆಯಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ, ವಿಶೇಷವಾಗಿ ಮಹಿಳೆಯರಲ್ಲಿ ಅರಿವು ಮೂಡಿಸುವುದು ಈ ಟೂರ್ನಿಯ ಪ್ರಮುಖ ಆಶಯವಾಗಿದೆ ಎಂದು ಹೇಳಿದರು.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ :
7892269215
ಇದನ್ನೂ ಓದಿ: ನಾಡ ಗ್ರಾಮ ಪಂಚಾಯತ್‌ಗೆ ಗಾಂಧಿ ಗ್ರಾಮ ಪುರಸ್ಕಾರ


















