ಬೆಂಗಳೂರು: ಪಂಚಾಯತ್ ರಾಜ್ (Panchayat Raj) ವಿಕೇಂದ್ರೀಕರಣದಲ್ಲಿ ಕರ್ನಾಟಕವು ದೇಶದಲ್ಲೇ ನಂಬರ್ 1 ರಾಜ್ಯ ಎನಿಸಿದೆ. ಕೇಂದ್ರ ಸರ್ಕಾರವು ಈ ಕುರಿತು ಬಿಡುಗಡೆ ಮಾಡಿದ ವರದಿಯಲ್ಲಿ ಕರ್ನಾಟಕವು ರಾಷ್ಟ್ರೀಯ ಮಟ್ಟದಲ್ಲಿ ಗಣನೀಯ ಸಾಧನೆ ಮಾಡಿದೆ. ಪಂಚಾಯತ್ ರಾಜ್ಯ ವ್ಯವಸ್ಥೆ ಮೂಲಕ ಹಲವು ಪ್ರಗತಿ ಪರ ಯೋಜನೆ, ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುವಲ್ಲಿ ಕರ್ನಾಟಕವು ಮಹತ್ವದ ಸಾಧನೆ ಮಾಡಿದಂತಾಗಿದೆ.
ಭಾರತೀಯ ಸಾರ್ವಜನಿಕ ಆಡಳಿತ ಸಂಸ್ಥೆ ಹಾಗೂ ಪಂಚಾಯತ್ ರಾಜ್ ಸಚಿವಾಲಯ ನಡೆಸಿರುವ 2023-24ನೇ ಸಾಲಿನಲ್ಲಿ ತಯಾರಿಸಿದ ಅಧ್ಯಯನ ವರದಿಯಲ್ಲಿ ಕರ್ನಾಟಕವು ನಂಬರ್ 1 ರಾಜ್ಯ ಎನಿಸಿದೆ. ದೆಹಲಿಯಲ್ಲಿ ಪಂಚಾಯತ್ ರಾಜ್ ಸಚಿವಾಲಯ ಮತ್ತು ಮೀನುಗಾರಿಕೆ, ಪಶು ಸಂಗೋಪನೆ ಹಾಗೂ ಹೈನುಗಾರಿಕೆ ಖಾತೆ ರಾಜ್ಯ ಸಚಿವ ಪ್ರೊ.ಎಸ್.ಪಿ.ಸಿಂಗ್ ಬಘೇಲ್ ಅವರು ವರದಿಯನ್ನು ಬಿಡುಗಡೆ ಮಾಡಿದ್ದಾರೆ.
ಹಣಕಾಸು ಉತ್ತರದಾಯಿತ್ವ, ಸಕಾಲದಲ್ಲಿ ಅನುದಾನ ಬಿಡುಗಡೆ, ಪರಿಣಾಮಕಾರಿಯಾಗಿ 15ನೇ ಹಣಕಾಸು ಆಯೋಗದ ಅನುದಾನ ಬಳಕೆ, ಸಾಮಾಜಿಕ ಆಡಿಟ್ ಕ್ಷೇತ್ರ, ಪರಿಣಾಮಕಾರಿಯಾಗಿ ಆರ್ಥಿಕ ವಿಕೇಂದ್ರೀಕರಣ ಸೇರಿ ಹಲವು ವಿಷಯಗಳಲ್ಲಿ ಕರ್ನಾಟಕವು ಮುನ್ನಡೆ ಸಾಧಿಸಿದೆ. ನಂತರದ ಸ್ಥಾನವನ್ನು ಒಡಿಶಾ, ಕೇರಳ ಹಾಗೂ ರಾಜಸ್ಥಾನ ಪಡೆದುಕೊಂಡಿವೆ.