ಬೆಂಗಳೂರು: ರಾಜ್ಯ ಅರಣ್ಯ ಇಲಾಖೆಯು 540 ಗಸ್ತು ಅರಣ್ಯ ಪಾಲಕರ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಕೊನೆಗೂ ಚಾಲನೆ ನೀಡಲಾಗಿದೆ. 2023-24ನೇ ಸಾಲಿನಲ್ಲಿ 540 ಗಸ್ತು ಅರಣ್ಯ ಪಾಲಕ (ವೃಂದ ಮತ್ತು ನೇಮಕಾತಿ ನಿಯಮಗಳಂತೆ ಅರಣ್ಯ ರಕ್ಷಕ) ಗ್ರೂಪ್ ‘ಸಿ’ ಹುದ್ದೆಗಳಿಗೆ ನೇರ ನೇಮಕಾತಿ ನಡೆಸುವ ಸಂಬಂಧ ಹೊಸ ನೋಟಿಫಿಕೇಶನ್ ಹೊರಡಿಸಲಾಗಿದೆ. ಇದರೊಂದಿಗೆ ಕಳೆದ ಒಂದು ವರ್ಷದಿಂದ ನನೆಗುದಿಗೆ ಬಿದ್ದಿದ್ದ ನೇಮಕಾತಿ ಪ್ರಕ್ರಿಯೆಗೆ ಚಾಲನೆ ದೊರೆತಂತಾಗಿದೆ. ಏಪ್ರಿಲ್ 16ರಿಂದ ಪಿಇಟಿ, ಪಿಎಸ್ ಟಿ ಪರೀಕ್ಷೆಗಳು ಆರಂಭವಾಗಲಿವೆ.
ಅರಣ್ಯ ಇಲಾಖೆಯ ಅಧಿಸೂಚನೆ ದಿನಾಂಕ: 17-11-2023ರಲ್ಲಿ 506 + 34 (ಹಿಂಬಾಕಿ) = ಒಟ್ಟು 540 ಅರಣ್ಯ ರಕ್ಷಕ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಸಂಬಂಧ ಆನ್ ಲೈನ್ ಮೂಲಕ ಸ್ವೀಕರಿಸಿದ ಅರ್ಜಿಗಳನ್ನು ಪರಿಶೀಲಿಸಲಾಗಿದೆ. ಅರಣ್ಯ ಇಲಾಖೆಯ ವಿವಿಧ ವೃತ್ತಗಳಲ್ಲಿ ಅಧಿಸೂಚಿತ ಹುದ್ದೆಗಳಿಗೆ ನಿಯಮಾನುಸಾರ 1:20 (ಹುದ್ದೆ:ಅಭ್ಯರ್ಥಿ) ಅಂತಿಮ ಅರ್ಹತಾ ಪಟ್ಟಿಗಳನ್ನು ಆಯಾ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ/ಅರಣ್ಯ ಸಂರಕ್ಷಣಾಧಿಕಾರಿ ರವರ ಮೂಲಕ ಅರಣ್ಯ ಇಲಾಖೆಯ ಅಧಿಕೃತ ಜಾಲತಾಣದಲ್ಲಿ ಈಗಾಗಲೇ ಪ್ರಕಟಿಸಿದೆ.
ಈ 1:20 ಅಂತಿಮ ಅರ್ಹತಾ ಪಟ್ಟಿಗಳ ಅಭ್ಯರ್ಥಿಗಳಿಗೆ ಈ ನೇಮಕಾತಿ ಪ್ರಕ್ರಿಯೆಯ ಮುಂದಿನ ಹಂತದ ಪರೀಕ್ಷೆಗಳಾದ 1.ದೈಹಿಕ ತಾಳ್ವಿಕೆ ಪರೀಕ್ಷೆ, 2.ದೈಹಿಕ ಕಾರ್ಯ ಕ್ಷಮತೆ ಪರೀಕ್ಷೆ ಹಾಗೂ 3.ಶಾರೀರಿಕ ಮಾನದಂಡಗಳ ಪರೀಕ್ಷೆಗಳನ್ನು ಸಂಬಂಧಿಸಿದ ವೃತ್ತಗಳಲ್ಲಿ ದಿನಾಂಕ 16-04-2025 (ಬುಧವಾರ)ರಿಂದ ಪ್ರಾರಂಭಿಸಲಾಗುತ್ತದೆ. ಸದರಿ ಪರೀಕ್ಷೆಗಳು ಪೂರ್ಣಗೊಳ್ಳುವವರೆಗೆ ಅಯೋಜಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪಿಇಟಿ, ಪಿಎಸ್ ಟಿ ಪರೀಕ್ಷಾ ದಿನಾಂಕ
ಪಿಇಟಿ, ಪಿಎಸ್ ಟಿ ಪರೀಕ್ಷೆಗಳು ಏಪ್ರಿಲ್ 16ರಿಂದ ಆರಂಭವಾಗುತ್ತವೆ. ಸದರಿ ಪರೀಕ್ಷೆಗಳಿಗೆ ಸ್ಥಳಗಳ ವಿವರಗಳನ್ನು ಆಯಾ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ/ಅರಣ್ಯ ಸಂರಕ್ಷಣಾಧಿಕಾರಿ ಅವರ ಮೂಲಕ ಅರಣ್ಯ ಇಲಾಖೆಯ ಅಧಿಕೃತ ಜಾಲತಾಣ www.aranya.gov.inದಲ್ಲಿ ಏ.16 ರೊಳಗೆ ಪ್ರಕಟಿಸಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.