ಬೆಂಗಳೂರು: ಕರ್ನಾಟಕದ ಉಪಚುನಾವಣೆ ಕಣ ರಂಗೇರಿದ್ದು, ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ಘೋಷಿಸಿದೆ. ಈ ಬಾರಿ ಅಭ್ಯರ್ಥಿ ಆಯ್ಕೆಯಲ್ಲಿ ಬಿಜೆಪಿ ಕೆಲವು ಅಚ್ಚರಿ ನಿರ್ಧಾರಗಳನ್ನು ಕೈಗೊಂಡಿದೆ.
ಬಾಗಲಕೋಟೆ ಕ್ಷೇತ್ರದಿಂದ ಮಾಜಿ ಶಾಸಕ ವೀರಣ್ಣ ಚರಂತಿಮಠ್ ಅವರಿಗೆ ಟಿಕೆಟ್ ನೀಡಲಾಗಿದೆ. ಈ ಕ್ಷೇತ್ರದಲ್ಲಿ ಅವರ ಅಭ್ಯರ್ಥಿತ್ವಕ್ಕೆ ಹೆಚ್ಚಿನ ವಿರೋಧ ವ್ಯಕ್ತವಾಗದೇ, ಜಿಲ್ಲಾ ಹಾಗೂ ರಾಜ್ಯ ಮಟ್ಟದ ನಾಯಕರ ಸಹಮತದಿಂದಲೇ ಆಯ್ಕೆ ನಡೆದಿದೆ.
ಇತ್ತ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಅಚ್ಚರಿ ತಂತ್ರ ಅನುಸರಿಸಿದೆ. ಸಾಮಾನ್ಯವಾಗಿ ಪ್ರಬಲ ಲಿಂಗಾಯತ ಮತ್ತು ಮರಾಠ ಸಮುದಾಯಗಳಿಗೆ ಆದ್ಯತೆ ನೀಡಲಾಗುತ್ತಿದ್ದರೂ, ಈ ಬಾರಿ ಎಸ್‌ಟಿ ಸಮುದಾಯದ ನಾಯಕ ಶ್ರೀನಿವಾಸ್ ಟಿ ದಾಸಕರಿಯಪ್ಪ ಅವರಿಗೆ ಟಿಕೆಟ್ ನೀಡಲಾಗಿದೆ.
ಶ್ರೀನಿವಾಸ್ ಟಿ ದಾಸಕರಿಯಪ್ಪ ಬಿಜೆಪಿ ರಾಜ್ಯ ಎಸ್‌ಟಿ ಮೋರ್ಚಾ ಉಪಾಧ್ಯಕ್ಷರಾಗಿದ್ದು, ಹಲವು ಬಾರಿ ಟಿಕೆಟ್ ವಂಚಿತರಾಗಿದ್ದರು. ಇತ್ತೀಚೆಗೆ ಪಕ್ಷೇತ್ರರಾಗಿ ಸ್ಪರ್ಧೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದ ಹಿನ್ನೆಲೆ, ಈ ಬಾರಿ ಪಕ್ಷವು ಅವರಿಗೆ ಅವಕಾಶ ಕಲ್ಪಿಸಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಸುಮಾರು 13 ಸಾವಿರ ಎಸ್‌ಟಿ ಮತದಾರರಿರುವುದನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಈ ಕ್ಷೇತ್ರದಲ್ಲಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ಅಜಯ್ ಕುಮಾರ್, ರಾಜೇನಹಳ್ಳಿ ಶಿವಕುಮಾರ್ ಸೇರಿದಂತೆ ಹಲವು ನಾಯಕರು ಟಿಕೆಟ್ ರೇಸ್‌ನಲ್ಲಿ ಇದ್ದರು. ಆದರೂ ಅಂತಿಮವಾಗಿ ಶ್ರೀನಿವಾಸ್ ಟಿ ದಾಸಕರಿಯಪ್ಪ ಅವರಿಗೆ ಮನ್ನಣೆ ಸಿಕ್ಕಿದೆ.
ಒಟ್ಟಾರೆ, ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಸಾಮಾಜಿಕ ಸಮೀಕರಣ ಬದಲಾಯಿಸುವ ಮೂಲಕ ಹೊಸ ರಾಜಕೀಯ ಲೆಕ್ಕಾಚಾರಕ್ಕೆ ಮುಂದಾಗಿದೆ. ಉಪಚುನಾವಣೆ ಘೋಷಣೆಯೊಂದಿಗೆ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.
ಇದನ್ನೂ ಓದಿ : ಧರ್ಮಸ್ಥಳ 74 ಅಸಹಜ ಸಾವು ಕೇಸ್‌ನ ಸಂಪೂರ್ಣ ತನಿಖಾ ವರದಿ ಸಲ್ಲಿಸಿ – ಸರ್ಕಾರಕ್ಕೆ ಹೈಕೋರ್ಟ್ ಆದೇಶ!



















