ಬೆಂಗಳೂರು: ಬೆಳಗಾವಿಯಲ್ಲಿ ನಡೆದ ಮರಾಠಿಗರ ಪುಂಡಾಟಿಕೆ ವಿರೋಧಿಸಿ ಕನ್ನಡಪರ ಸಂಘಟನೆಗಳು ಮಾರ್ಚ್ 22ರಂದು ಕರ್ನಾಟಕ ಬಂದ್ ಗೆ ಕರೆ ನೀಡಿವೆ. ಈ ಮಧ್ಯೆ ಅಂದು ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಕೂಡ ನಡೆಯುತ್ತಿದ್ದು, ವಿದ್ಯಾರ್ಥಿಗಳು ಹಾಗೂ ಪಾಲಕರು ಆತಂಕದಲ್ಲಿದ್ದಾರೆ.
ಈಗಾಗಲೇ ಕರ್ನಾಟಕ ಬಂದ್ ಗೆ ಕರೆ ನೀಡಿರುವ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್, ಮಾರ್ಚ್ 22ರಂದು ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ಬಂದ್ ಇರಲಿದೆ ಎಂದು ಕರೆ ಕೊಟ್ಟಿದ್ದಾರೆ. ಈಗಾಗಲೇ ಬಂದ್ ಗೆ ಹಲವಾರು ಸಂಘಟನೆಗಳು ಬೆಂಬಲ ನೀಡಿವೆ.
ಕರ್ನಾಟಕ ಬಂದ್ ಗೆ ಬೆಂಬಲ.. ..
- ಕನ್ನಡ ಪರ ಸಂಘಟನೆಗಳ ಒಕ್ಕೂಟ
- ಕರವೇ ಪ್ರವೀಣ್ ಶೆಟ್ಟಿ ಬಣ
- ಕರ್ನಾಟಕ ಕನ್ನಡ ಸೇನೆ
- ಒಲಾ ಉಬರ್ ಟ್ಯಾಕ್ಸಿ ಅಸೋಸಿಯೇಷನ್
- ಎಪಿಎಂಸಿ ಕಾರ್ಮಿಕರ ಸಂಘ
- ಕರ್ನಾಟಕ ಕಾರ್ಮಿಕ ಪರಿಷತ್
- ಏರ್ಪೋಟ್ ಟ್ಯಾಕ್ಸಿ ಅಸೋಸಿಯೇಷನ್
- ಡಾ.ವಿಷ್ಣು ಅಭಿಮಾನಿ ಬಳಗ
- ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಒಕ್ಕೂಟ
- ಬೆಂಗಳೂರು ಓಲಾ ಊಬರ್ ಅಸೋಸಿಯೇಷನ್
- ಬೆಂಗಳೂರು ಆಟೋ ಸೇನೆ
- ARDU
ಕರ್ನಾಟಕ ಬಂದ್ ಗೆ ಬೆಂಬಲ ಇಲ್ಲ..
- ಕರವೇ ನಾರಾಯಣ ಗೌಡ ಬಣ
- ರಾಜ್ಯ ಹೊಟೇಲ್ ಮಾಲೀಕರ ಸಂಘ
- ಖಾಸಗಿ ಶಾಲೆಗಳ ಒಕ್ಕೂಟ
- ಬೆಂಗಳೂರು ಹೊಟೇಲ್ ಮಾಲೀಕರ ಸಂಘ
- ರಾಜ್ಯ ಪೋಷಕರ ಸಂಘ
- ಬೀದಿ ಬದಿ ವ್ಯಾಪಾರಿಗಳ ಸಂಘ
- ಬಾರ್ ಅಂಡ್ ರೆಸ್ಟೋರೆಂಟ್ ಅಸೋಸಿಯೇಶನ್..
ಈ ಪೈಕಿ ಕೆಲವು ಸಂಘಟನೆಗಳು ಬಂದ್ ಗೆ 50-50 ಬೆಂಬಲವಷ್ಟೇ ನೀಡಿವೆ. ಆದರೆ, ಮೊದಲ ತರಗತಿಯಿಂದ ಎಸ್ಸೆಸ್ಸೆಲ್ಸಿ ವರೆಗೆ ಪರೀಕ್ಷೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಪಾಲಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಎಂಇಎಸ್ ಪುಂಡರಿಗೆ ಬುದ್ಧಿ ಕಲಿಸುವುದಕ್ಕೆ ಇದೇ ದಿನದ ಅವಶ್ಯಕತೆ ಇರಲಿಲ್ಲ. ಪರೀಕ್ಷೆಗಳು ಮುಗಿದ ಮೇಲೆ ಅಥವಾ ರಜೆ ಇದ್ದಾಗ ಬಂದ್ ಗೆ ಕರೆ ನೀಡಬಹುದಿತ್ತು. ಎಂಇಎಸ್ ಪುಂಡರ ಉಪಟಳಕ್ಕೆ ನಮ್ಮ ಧಿಕ್ಕಾರವೂ ಇದೆ. ಅವರ ಉಪಟಳ ನಿಲ್ಲಲೇಬೇಕು. ಆದರೆ, ಬಂದ್ ಗೆ ಕರೆ ನೀಡಿರುವ ದಿನ ಇದಲ್ಲ ಎಂದು ಕೂಡ ಹಲವರು ಹೇಳುತ್ತಿದ್ದಾರೆ.