ಬೆಂಗಳೂರು: ಕರ್ನಾಟಕ ಬಂದ್ ರಾಜ್ಯಾದ್ಯಂತ ಯಶಸ್ಸು ಕಂಡಿದೆ ಎಂದು ಮಾಜಿ ಶಾಸಕ, ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ (Vatal Nagaraj) ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂದ್ ಗೆ ಸಾಕಷ್ಟು ಜನ ಬೆಂಬಲ ನೀಡಿದ್ದಾರೆ. ಹಲವರು ಅವರದ್ದೇ ರೀತಿಯಲ್ಲಿ ಬಂದ್ ಗೆ ಬೆಂಬಲ ನೀಡಿದ್ದಾರೆ. ಕೆಲವೆಡೆ ಬಸ್ ಓಡಾಡುತ್ತಿವೆ. ಕೆಲವೆಡೆ ಜನ ಇಲ್ಲ. ಹಲವೆಡೆ ಬಸ್ ನಿಲ್ದಾಣಗಳಲ್ಲಿ ಜನ ಇಲ್ಲ. ಹೀಗಾಗಿ ಕನ್ನಡಿಗರು ಕರೆದ ಬಂದ್ ಯಶಸ್ವಿಯಾಗಿದೆ. ಈಗಾಗಲೇ ಬಂದ್ ನ ಬೇಡಿಕೆಗಳನ್ನು ಸರ್ಕಾರದ ಮುಂದೆ ಇಡಲಾಗಿದೆ ಎಂದಿದ್ದಾರೆ.
ಪ್ರತಿಭಟನೆ ನಡೆಸಿದ ನಮ್ಮವರನ್ನು ಬಂಧಿಸಿದ್ದಾರೆ. ಬೆಂಗಳೂರು ಕಮಿಷನರ್ ಚಾಲೆಂಜ್ ನ್ನು ವೈಯಕ್ತಿಕವಾಗಿ ತೆಗೆದುಕೊಂಡಿದ್ದಾರೆ. ಭಾಸ್ಕರ್ ರಾವ್ ರೀತಿ ಇವರು ರಾಜಕೀಯಕ್ಕೆ ಬರುತ್ತಾರೋ ಏನೋ ಗೊತ್ತಿಲ್ಲ. ನನಗೂ ನೊಟೀಸ್ ಕೊಟ್ಟಿದ್ದಾರೆ. ಫ್ರೀಡಂ ಪಾರ್ಕ್‌ನಲ್ಲಿ ಮಾತ್ರ ಹೋರಾಟ ಮಾಡಿ ಅಂದಿದ್ದಾರೆ. ಟೌನ್ ಹಾಲ್‌ನಲ್ಲಿ ಪರ್ಮಿಷನ್ ಇಲ್ಲ ಅಂದಿದ್ದಾರೆ. ಈ ರೀತಿ ಬಂದ್ ಹತ್ತಿಕ್ಕುವ ಕೆಲಸ ಮಾಡಬಾರದು. ಹೋರಾಟದಲ್ಲಿ ಒಂದು ಹನಿ ನೀರು ಸಿಗದ ರೀತಿ ಆಗಬೇಕಿತ್ತು. ಆದರೂ ಯಶಸ್ಸು ಸಿಕ್ಕಿದೆ ಎಂದು ಗುಡುಗಿದ್ದಾರೆ.
ನಮ್ಮ ಹೋರಾಟ ಯಾವಾಗಲೂ ನಿರಂತರವಾಗಿರುತ್ತದೆ. ಯಾವುದೇ ಪಿತೂರಿಗೆ ನಾವು ಭಯ ಬೀಳುವುದಿಲ್ಲ. ನೈತಿಕತೆ ಬೆಂಬಲ ಅಂತ ಈಗ ಹುಟ್ಟಿದೆ. ನಮಗೆ ಈ ಬೆಂಬಲ ಬೇಡ. ಹೋಟೆಲ್‌ನವರಿಗೆ ಭಾರಿ ದುರಹಂಕಾರ ಬಂದಿದೆ. ಎಲ್ಲದೂ ಪೊಲೀಸ್ ಕೈಯಲ್ಲೇ ಇದೆ. ತೀರ ಹತ್ತಿಕ್ಕುವ ಮಟ್ಟಕ್ಕೆ ಹೋಗಬಾರದು ಎಂದು ಆರೋಪಿಸಿ ಗುಡುಗಿದ್ದಾರೆ.