ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ(Chinnaswamy Stadium) ನಡೆದ ರಣಜಿ ಟೂರ್ನಿಯ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ ನೇತೃತ್ವದ ಕರ್ನಾಟಕ ತಂಡವು ಪಂಜಾಬ್ ವಿರುದ್ಧ ಭರ್ಜರಿ ಜಯ ಸಾಧಿಸಿದೆ.
ನಾಯಕ ಮಯಾಂಕ್ ಅಗರ್ವಾಲ್ ಟಾಸ್ ಸೋತು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರು. ನಾಯಕನ ನಿರ್ಧಾರ ಸಮರ್ಥಿಸಿಕೊಂಡ ಬೌಲರ್ ಗಳು ಸಂಘಟಿತ ದಾಳಿ ನಡೆಸಿ ಪಂಜಾಬ್ ತಂಡದ ಬ್ಯಾಟಿಂಗ್ ನ್ನು ಮಕಾಡೆ ಮಲಗಿಸಿದರು. ಕರ್ನಾಟಕದ ಬಿಗಿ ಬೌಲಿಂಗ್ ಎದುರು ಮಂಡಿಯೂರಿದ ಪಂಜಾಬ್ ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 55 ರನ್ ಗಳಿಗೆ ಆಲೌಟ್ ಆಯಿತು. ಕರ್ನಾಟಕದ ಪರ ವಾಸುಕಿ ಕೌಶಿಕ್ 4 ವಿಕೆಟ್ ಪಡೆದರೆ, ಅಭಿಲಾಷ್ ಶೆಟ್ಟಿ 3 ವಿಕೆಟ್ ಗಳಿಸಿದ್ದರು.
ನಂತರ ಮೊದಲ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡಕ್ಕೆ ಸ್ಮರಣ್ ರವಿಚಂದ್ರನ್ ಚೊಚ್ಚಲ ದ್ವಿಶತಕ ಸಿಡಿಸಿ ಆಸರೆಯಾದರು. ಸ್ಮರಣ್, 277 ಎಸೆತ ಎದುರಿಸಿ 3 ಸಿಕ್ಸ್ ಹಾಗೂ 25 ಫೋರ್ಗಳೊಂದಿಗೆ 203 ರನ್ ಗಳಿಸಿದರು. ಪರಿಣಾಮ ಕರ್ನಾಟಕ ತಂಡ 475 ರನ್ ಗಳಿಸಿ ಆಲೌಟ್ ಆಯಿತು.
420 ರನ್ ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಪಂಜಾಬ್ ತಂಡ ಮತ್ತೆ ಬ್ಯಾಟಿಂಗ್ ವಿಭಾಗದಲ್ಲಿ ಎಡವಿತು. ಆರಂಭಿಕ ಆಟಗಾರ ಪ್ರಭ್ಸಿಮ್ರಾನ್ ಸಿಂಗ್ 1 ರನ್ಗಳಿಸಿ ಔಟಾದರೆ, ಅನ್ಮೋಲ್ಪ್ರೀತ್ ಸಿಂಗ್ 14 ರನ್ ಗಳಿಸಿದರು. ಶುಭ್ಮನ್ ಗಿಲ್ ಏಕಾಂಗಿ ಹೋರಾಟ ನಡೆಸಿ ತಂಡದ ರನ್ ನ ಗತಿ ಏರಿಸಿದರು. 171 ಎಸೆತಗಳನ್ನು ಎದುರಿಸಿದ ಶುಭ್ ಮನ್ ಗಿಲ್ 3 ಸಿಕ್ಸ್ ಹಾಗೂ 14 ಫೋರ್ ಗಳೊಂದಿಗೆ 102 ರನ್ ಗಳಿಸಿದರು. ಗಿಲ್ ಔಟ್ ಆಗುತ್ತಿದ್ದಂತೆ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಕರ್ನಾಟಕ ಬೌಲರ್ಗಳು, ಅಂತಿಮವಾಗಿ ಪಂಜಾಬ್ ತಂಡವನ್ನು 213 ರನ್ ಗಳಿಗೆ ಆಲೌಟ್ ಮಾಡಿದರು. ಈ ಮೂಲಕ ಕರ್ನಾಟಕ ತಂಡ ಇನಿಂಗ್ಸ್ ಹಾಗೂ 207 ರನ್ಗಳ ಜಯ ಸಾಧಿಸಿದೆ.