ಬೆಂಗಳೂರು: ಕಾಲಚಕ್ರ ಯಾರನ್ನೂ ಬಿಡುವುದಿಲ್ಲ. ಈಗ ಕರ್ಮ ಸಿಎಂ ಸಿದ್ದರಾಮಯ್ಯ ಅವರನ್ನು ಹಿಂಬಾಲಿಸುತ್ತಿದೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ವ್ಯಂಗ್ಯವಾಡಿದ್ದಾರೆ.
ಬಿಜೆಪಿ- ಜೆಡಿಎಸ್ ಜಂಟಿಯಾಗಿ ಹಮ್ಮಿಕೊಂಡಿರುವ ‘ಮೈಸೂರು ಚಲೋ’ ಪಾದಯಾತ್ರೆ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಿ ಯಾರನ್ನೂ ಬಿಡುವುದಿಲ್ಲ. ನಮ್ಮ ಮೇಲೆ ಸುಳ್ಳು ಆರೋಪ ಮಾಡಿ ಸಿದ್ದರಾಮಯ್ಯ ಬಳ್ಳಾರಿಗೆ ಪಾದಯಾತ್ರೆ ಕೈಗೊಂಡಿದ್ದರು. ಆಗ ಅವರ ಸುಳ್ಳು ಆರೋಪಗಳಿಂದ ನಾವು ಸಂಕಷ್ಟ ಅನುಭವಿಸುವಂತಾಯಿತು. ನಾನು ಅನುಭವಿಸಿದ ನೋವನ್ನು ಇಡೀ ರಾಜ್ಯವೇ ನೋಡಿದೆ. ತಪ್ಪು ಮಾಡಿದರೆ ದೈವ ಕ್ಷಮಿಸಬಹುದು. ಆದರೆ, ಕರ್ಮ ನಮ್ಮನ್ನು ಎಂದಿಗೂ ಬಿಡುವುದಿಲ್ಲ ಎಂದು, ಹಿಂದೆ ಸಿಎಂ ಸಿದ್ದರಾಮಯ್ಯ ಬಳ್ಳಾರಿ ಪಾದಯಾತ್ರೆ ಹಮ್ಮಿಕೊಂಡು ತಮ್ಮ ವಿರುದ್ಧ ಗುಡುಗಿದ್ದನ್ನು ಸ್ಮರಿಸಿದ್ದಾರೆ.
ಮುಡಾದಲ್ಲಿ ಹಗರಣವಾಗಿದ್ದು, ಸಿಎಂ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮೈಸೂಲು ಚಲೋ ಹಮ್ಮಿಕೊಂಡಿದೆ. ಹೀಗಾಗಿ ಕಾಂಗ್ರೆಸ್ ಹಾಗೂ ದೋಸ್ತಿ ಮಧ್ಯೆ ತೀವ್ರ ರಾಜಕೀಯ ಕೆಸರೆರಚಾಟ ಶುರುವಾಗಿದೆ.