ಮುಂಬೈ: ಭಾರತ ತಂಡವು ತನ್ನದೇ ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 0-2 ಅಂತರದಲ್ಲಿ ಹೀನಾಯ ಸೋಲು ಕಂಡಿರುವುದು ಕ್ರಿಕೆಟ್ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಭಾರತದ ದಿಗ್ಗಜ ಆಟಗಾರ ಕಪಿಲ್ ದೇವ್, ಪ್ರಸ್ತುತ ಆಟಗಾರರು ಟಿ20 ಕ್ರಿಕೆಟ್ ಮತ್ತು ಐಪಿಎಲ್ ವ್ಯಾಮೋಹದಲ್ಲಿ ಬೌಲರ್ ಸ್ನೇಹಿ ಪಿಚ್‌ಗಳನ್ನು ಮರೆತಿದ್ದಾರೆ ಎಂದು ಕಿಡಿಕಾರಿದ್ದಾರೆ.
“ಇಂದಿನ ಎಷ್ಟು ಮಂದಿ ಅಗ್ರ ಆಟಗಾರರು ದೇಶೀ ಕ್ರಿಕೆಟ್ ಆಡುತ್ತಿದ್ದಾರೆ? ಸ್ಪಿನ್ ಬೌಲಿಂಗ್ ಎದುರಿಸಲು ಕೇವಲ ನೆಟ್ ಪ್ರಾಕ್ಟೀಸ್ ಸಾಲದು. ವೈವಿಧ್ಯಮಯ ಪಿಚ್‌ಗಳಲ್ಲಿ ಆಡಿದ ಅನುಭವ ಬೇಕು. ದೇಶೀ ಕ್ರಿಕೆಟ್ ಆಡದಿದ್ದರೆ ಮತ್ತು ಗುಣಮಟ್ಟದ ಬೌಲರ್‌ಗಳನ್ನು ಎದುರಿಸದಿದ್ದರೆ ಇಂತಹ ಸೋಲುಗಳು ಸಾಮಾನ್ಯವಾಗುತ್ತವೆ,” ಎಂದು ಕಪಿಲ್ ದೇವ್ ಕಟುವಾಗಿ ಟೀಕಿಸಿದ್ದಾರೆ. ಹಿಂದೆ ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್ ಅವರಂತಹ ಆಟಗಾರರು ದೇಶೀ ಕ್ರಿಕೆಟ್ ಆಡಿ ಸ್ಪಿನ್ ಅನ್ನು ಸಮರ್ಥವಾಗಿ ಎದುರಿಸುವ ಕಲೆ ಕರಗತ ಮಾಡಿಕೊಂಡಿದ್ದರು ಎಂದು ಅವರು ನೆನಪಿಸಿಕೊಂಡರು.
ಪಿಚ್‌ಗಳ ಬಗ್ಗೆ ಅಸಮಾಧಾನ
ಕೇವಲ ಆಟಗಾರರನ್ನಷ್ಟೇ ಅಲ್ಲದೆ, ಕಪಿಲ್ ದೇವ್ ಪಿಚ್‌ಗಳ ಗುಣಮಟ್ಟದ ಬಗ್ಗೆಯೂ ಪ್ರಶ್ನೆ ಎತ್ತಿದ್ದಾರೆ. “ಎರಡೂವರೆ ದಿನಗಳಲ್ಲಿ ಪಂದ್ಯ ಮುಗಿಯುವಂತಹ ಪಿಚ್‌ಗಳನ್ನು ಸಿದ್ಧಪಡಿಸುವುದರಲ್ಲಿ ಅರ್ಥವಿಲ್ಲ. ಟಾಸ್ ಸೋತರೆ ಪಂದ್ಯವನ್ನೇ ಸೋಲುವ ಪರಿಸ್ಥಿತಿ ಇರಬಾರದು. 200 ರನ್ ದಾಟದ ಪಿಚ್‌ಗಳು ಟೆಸ್ಟ್ ಕ್ರಿಕೆಟ್‌ನ ಆರೋಗ್ಯಕ್ಕೆ ಒಳ್ಳೆಯದಲ್ಲ,” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸತತ ಮುಖಭಂಗ
ಭಾರತ ತಂಡವು ಕಳೆದ 12 ತಿಂಗಳಲ್ಲಿ ತವರಿನಲ್ಲಿ ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಸತತ ಎರಡು ವೈಟ್‌ವಾಶ್ ಸೋಲುಗಳನ್ನು ಕಂಡಿದೆ. 1984ರ ನಂತರ ಭಾರತ ತವರಿನಲ್ಲಿ ಸತತ ಸರಣಿ ಸೋಲುತ್ತಿರುವುದು ಇದೇ ಮೊದಲು. ಸೈಮನ್ ಹಾರ್ಮರ್ ಮತ್ತು ಕೇಶವ್ ಮಹಾರಾಜ್ ಅವರಂತಹ ಸ್ಪಿನ್ನರ್‌ಗಳ ಎದುರು ಭಾರತೀಯ ಬ್ಯಾಟರ್‌ಗಳು ಮಂಡಿಯೂರಿದ್ದು ಕಪಿಲ್ ದೇವ್ ಅವರ ಆಕ್ರೋಶಕ್ಕೆ ಪ್ರಮುಖ ಕಾರಣವಾಗಿದೆ.
ಇದನ್ನೂ ಓದಿ: ಭಾರತೀಯ ಸಂಸ್ಕೃತಿಗೆ ಮಾರುಹೋದ ವಿದೇಶಿ ವಧು-ವರ | ವೈದಿಕ ಮಂತ್ರಗಳ ಮಧ್ಯೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಾರ್ವೇ ಜೋಡಿ



















