ಬ್ಲಾಕ್ ಬಸ್ಟರ್ ಕಾಂತಾರ: ಚಾಪ್ಟರ್ 1 ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈಗಾಗಲೇ ಈ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಎಂಬ ಖ್ಯಾತಿಯನ್ನು ‘ಕಾಂತಾರ: ಚಾಪ್ಟರ್ 1’ ತನ್ನದಾಗಿಸಿಕೊಂಡಿದೆ. ಸದ್ಯ ಈ ಚಿತ್ರವು ಯಾವಾಗ ಒಟಿಟಿಗೆ ಬರಲಿದೆ ಎಂಬ ಚರ್ಚೆಗೆ ಉತ್ತರ ಸಿಕ್ಕಿದೆ. ಅಧಿಕೃತವಾಗಿ ‘ಕಾಂತಾರ: ಚಾಪ್ಟರ್ 1’ ಚಿತ್ರದ ಒಟಿಟಿ ರಿಲೀಸ್ ಡೇಟ್ ಅನ್ನು ಘೋಷಣೆ ಮಾಡಲಾಗಿದ್ದು,ಆ ಪ್ರಕಾರ ಅಕ್ಟೋಬರ್ 31ರಿಂದಲೇ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ.
ರಿಷಬ್ ಶೆಟ್ಟಿ ನಟನೆಯ ‘ಕಾಂತಾರ: ಚಾಪ್ಟರ್ 1’ ಸಿನಿಮಾವನ್ನು ಅಕ್ಟೋಬರ್ 31ರಿಂದ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ವೀಕ್ಷಣೆ ಮಾಡಬಹುದಾಗಿದೆ. ಈ ವಿಚಾರವನ್ನು ವಿಶೇಷ ಪ್ರೋಮೋ ಮೂಲಕ ಅಮೆಜಾನ್ ಪ್ರೈಮ್ ವಿಡಿಯೋ ಸಂಸ್ಥೆ ಘೋಷಣೆ ಮಾಡಿಕೊಂಡಿದೆ. ಅಕ್ಟೋಬರ್ 2ರಂದು ‘ಕಾಂತಾರ 1’ ತೆರೆಕಂಡಿತ್ತು, ಇದೀಗ ಒಂದು ತಿಂಗಳು ತುಂಬುವುದರೊಳಗೆ ಸಿನಿಮಾ ಒಟಿಟಿಗೆ ಎಂಟ್ರಿ ನೀಡಿದೆ.
ರಿಷಬ್ ಶೆಟ್ಟಿ ಅವರು ‘ಕಾಂತಾರ: ಚಾಪ್ಟರ್ 1’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಅವರೇ ಮುಖ್ಯ ಪಾತ್ರದಲ್ಲೂ ಅಭಿನಯಿಸಿದ್ದಾರೆ. 2022ರಲ್ಲಿ ತೆರೆಕಂಡ ‘ಕಾಂತಾರ’ ಚಿತ್ರದ ಪ್ರೀಕ್ವೆಲ್ ಆಗಿ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಂದಿದೆ. ರುಕ್ಮಿಣಿ ವಸಂತ್ ಅವರು ರಿಷಬ್ ಶೆಟ್ಟಿಗೆ ಜೋಡಿಯಾಗಿ ನಟಿಸಿದ್ದಾರೆ. ಈ ಸಿನಿಮಾದಿಂದ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ.
‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆಯು ‘ಕಾಂತಾರ: ಚಾಪ್ಟರ್ 1’ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಭಾರಿ ಬಜೆಟ್ನಲ್ಲಿ ಸಿದ್ಧವಾದ ಈ ಸಿನಿಮಾ ಉತ್ತಮವಾಗಿ ಕಲೆಕ್ಷನ್ ಮಾಡಿದೆ. ವಿಶ್ವಾದ್ಯಂತ ಈ ಚಿತ್ರಕ್ಕೆ 800 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಆಗಿದೆ. ಇಂದಿಗೂ ಹಲವು ಚಿತ್ರಮಂದಿರಗಳಲ್ಲಿ ಈ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಹಾಗಿರುವಾಗಲೇ ಒಟಿಟಿ ಅಂಗಳಕ್ಕೆ ಕಾಲಿಡುತ್ತಿದೆ.
ತುಳುನಾಡಿನ ದೈವದ ಕತೆಯನ್ನು ‘ಕಾಂತಾರ: ಚಾಪ್ಟರ್ 1’ ಸಿನಿಮಾದಲ್ಲಿ ಹೇಳಲಾಗಿದೆ. ರಿಷಬ್ ಶೆಟ್ಟಿ ಅವರ ನಟನೆಗೆ ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ. ಅಜನೀಶ್ ಲೋಕನಾಥ್ ಅವರ ಸಂಗೀತ ಗಮನ ಸೆಳೆದಿದೆ. ಜಯರಾಮ್, ಗುಲ್ಶನ್ ದೇವಯ್ಯ, ಪ್ರಕಾಶ್ ತುಮಿನಾಡು ಮುಂತಾದ ಕಲಾವಿದರ ಅಭಿನಯ ಕೂಡ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ.
ಇದನ್ನೂ ಓದಿ : ಬೆಂಗಳೂರು | ಓವರ್ ಟೇಕ್ ಮಾಡಲು ಹೋಗಿ ಮಗುಚಿ ಬಿದ್ದ ಆಟೋ.. ವಿಡಿಯೋ ವೈರಲ್!



















