ಬೆಂಗಳೂರು: ಹೊಂಬಾಳೆ ಫಿಲ್ಮ್ಸ್‌ನ ಕಾಂತಾರ ಅಧ್ಯಾಯ 1 ಚಿತ್ರವು ಬಿಡುಗಡೆಯಾದ 2025 ಅ.2ರಿಂದ ಇಲ್ಲಿಯವರೆಗೆ ವಿಶ್ವಾದ್ಯಂತ ₹509ಕೋಟಿಗೂ ಹೆಚ್ಚು ಗಳಿಕೆ ಮಾಡುವ ಮೂಲಕ ಭರ್ಜರಿ ಯಶಸ್ಸನ್ನು ಸಾಧಿಸಿದೆ.
ನಿರ್ದೇಶಕ ಹಾಗೂ ನಟ ರಿಷಬ್ ಶೆಟ್ಟಿಯವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರವು ಅದರ ಅದ್ಭುತ ಕಥಾಹಂದರ, ನಮ್ಮ ನೆಲದ ಸಂಸ್ಕೃತಿಯ ವಾಸ್ತವಿಕ ಚಿತ್ರಣ ಮತ್ತು ತಾಂತ್ರಿಕ ಉತ್ಕೃಷ್ಟತೆಗಾಗಿ ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಸರಿಸಾಟಿಯಿಲ್ಲದ ಪ್ರಶಂಸೆ ಗಳಿಸಿದೆ. ಈ ಚಿತ್ರವು ದೇಶಾದ್ಯಂತ ಹಾಗೂ ವಿದೇಶಿ ಮಾರುಕಟ್ಟೆಗಳಲ್ಲಿ ತನ್ನ ಅಬ್ಬರವನ್ನು ಮುಂದುವರೆಸಿದ್ದು, ಕನ್ನಡ ಚಿತ್ರರಂಗದ ಜಾಗತಿಕ ವಿಸ್ತಾರವನ್ನು ಇನ್ನಷ್ಟು ದೃಢಪಡಿಸಿದೆ.

2022ರ ಕಾಂತಾರದ ಯಶಸ್ಸಿನ ನಂತರ, ಈ ಪೂರ್ವಕಥೆಯು (Prequel) ಫ್ರಾಂಚೈಸಿಯ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ರಾಜಕುಮಾರ, ಕೆಜಿಎಫ್ ಅಧ್ಯಾಯ 1 & 2, ಕಾಂತಾರ ಮತ್ತು ಸಲಾರ್ ನಂತಹ ಬೃಹತ್ ಚಿತ್ರಗಳನ್ನು ನೀಡಿದ ಹೊಂಬಾಳೆ ಫಿಲ್ಮ್ಸ್, ಇಂದು ಭಾರತೀಯ ಸಿನಿಮಾದಲ್ಲಿ ಅತ್ಯಂತ ಯಶಸ್ವಿ ಮತ್ತು ಗೌರವಾನ್ವಿತ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.