ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ಬಹುನಿರೀಕ್ಷಿತ ಕಾಂತಾರ ಚಾಪ್ಟರ್ 1 ಚಿತ್ರದ ಫಸ್ಟ್ ಡೇ ಫಸ್ಟ್ ಶೋ ಆರಂಭಗೊಂಡಿದೆ. ಪ್ರಪಂಚದಾದ್ಯಂತ ಬೆಳಗ್ಗೆಯಿಂದಲೇ ಶೋಗಳು ಆರಂಭವಾಗಿದ್ದು, ಕರ್ನಾಟದಲ್ಲಿ ಬೆಂಗಳೂರು ಸೇರಿದಂತೆ ಎಲ್ಲಾ ನಗರಗಳಲ್ಲಿ ಒಂದು ವಾರಕ್ಕೆ ಮುಂಚೆಯೇ ಜನರು ಮುಂಗಡವಾಗಿ ಟಿಕೆಟ್ ಕಾಯ್ದಿರಿಸಿದ್ದರು. ಹಾಗಾಗಿ ಕಾಂತಾರ ಚಾಪ್ಟರ್ 1 ಪ್ರದರ್ಶನ ಕಾಣುತ್ತಿರುವ ಥಿಯೇಟರ್ ಮುಂದೆ ಹೌಸ್ ಫುಲ್ ಪ್ರದರ್ಶನ ಫಲಕಗಳು ಕಾಣುತ್ತಿವೆ.
ಕಾಂತಾರ ಚಾಪ್ಟರ್ 1 ಚಿತ್ರಕ್ಕೆ ಪೇಯ್ಡ್ ಪ್ರೀಮಿಯರ್ ಶೋನಲ್ಲಿಯೇ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ಹಿಂದೆಂದೂ ನೋಡಿರದ ಅನುಭವನ್ನೆ ಈ ಚಿತ್ರ ಪ್ರತಿಯೊಬ್ಬರಿಗೂ ನೀಡಿದ್ದು, ಮೊದಲ ಫ್ರೇಮ್‌ನಿಂದ ಹಿಡಿದು ಕೊನೆಯ ದೃಶ್ಯದವರೆಗೂ ಈ ಚಿತ್ರ ಪ್ರೇಕ್ಷಕರನ್ನ ಕಾಂತಾರ ಲೋಕಕ್ಕೆ ಕರೆದುಕೊಂಡು ಹೋಗಿದೆ. ದೈವದ ವಿಶೇಷ ಅನುಭವ ನೀಡಿದಲ್ಲದೆ, ಎಲ್ಲರನ್ನು ರೋಮಾಂಚನಗೊಳಿಸಿದೆ.
ಈ ಹಿಂದೆ ನಟ ರಿಷಬ್ ಶೆಟ್ಟಿ ‘ಕಾಂತಾರ’ ಸಿನಿಮಾದಲ್ಲಿ ಕರಾವಳಿ ಸೊಗಡು, ದೈವಗಳ ಬಗ್ಗೆ ಹೇಳುತ್ತಲೇ ಅಲ್ಲಿನ ಬದುಕನ್ನು ಕಟ್ಟಿಕೊಟ್ಟ ಪರಿ, ಸಿನಿಪ್ರಿಯರನ್ನು ಸೆಳೆದಿತ್ತು ಮತ್ತು ಅದು ಈಗಿನ ಕಾಲಘಟ್ಟದ ಕಥೆಯಾಗಿತ್ತು. ಆದರೆ ಈಗ ‘ಕಾಂತಾರ ಚಾಪ್ಟರ್ 1’ ಸಿನಿಮಾದಲ್ಲಿ ರಿಷಬ್ ಸುಮಾರು 1500 ವರ್ಷ ಹಿಂದಕ್ಕೆ ಹೋಗಿದ್ದಾರೆ. ಕ್ರಿ.ಶ.4-5 ಶತಮಾನದ ಕದಂಬರ ಆಳ್ವಿಕೆಯ ಸಮಯವನ್ನು ಹಿನ್ನೆಲೆಯಾಗಿಟ್ಟುಕೊಂಡು ಒಂದು ಮಾಯಾವಿ ಲೋಕವನ್ನು ಪ್ರೇಕ್ಷಕರ ಮುಂದಿರಿಸಿದ್ದಾರೆ.



















