ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರುವ ‘ಕಾಂತಾರ 1’ ಸಿನೆಮಾ ಈ ವರ್ಷ ತೆರೆ ಕಾಣುವ ನಿರೀಕ್ಷೆಯಿದೆ. ಸಿನಿಮಾದ ಕಥೆ, ಪಾತ್ರಗಳ ವಿಷಯಗಳನ್ನು ನಿರ್ಮಾಣ ಸಂಸ್ಥೆ ಗುಟ್ಟಾಗಿರಿಸಿದೆ.
ಕೆಲವು ದಿನಗಳ ಹಿಂದಷ್ಟೆ ಸಿನೆಮಾದಲ್ಲಿ ರುಕ್ಮಿಣಿ ವಸಂತ್ ನಟಿಸುತ್ತಿರುವುದಾಗಿ ಫೋಟೊ ಒಂದನ್ನು ಹೊಂಬಾಳೆ ಸಂಸ್ಥೆ ಹಂಚಿಕೊಂಡಿತ್ತು. ಇದೀಗ ಕನ್ನಡ ಮೂಲದ ಬಾಲಿವುಡ್ ಹೆಚ್ಚು ಪರಿಚಿತವಾಗಿರುವ ನಟರೊಬ್ಬರು ‘ಕಾಂತಾರ 1’ನಲ್ಲಿ ನಟಿಸುತ್ತಿರುವುದಾಗಿ ಸುದ್ದಿ ಹಂಚಿಕೊಂಡಿದೆ.
ಎರಡು ದಶಕಗಳಿಂದಲೂ ಚಿತ್ರರಂಗದಲ್ಲಿರುವ ಕನ್ನಡಿಗ ಗುಲ್ಷನ್ ದೇವಯ್ಯ ‘ಕಾಂತಾರ 1’ ಸಿನಿಮಾದ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. “ಕುಲಶೇಖರ” ಎಂಬ ಪಾತ್ರದಲ್ಲಿ ಗುಲ್ಷನ್ ದೇವಯ್ಯ ನಟಿಸುತ್ತಿದ್ದಾರೆ. ರಾಜನ ಪೋಷಾಕು ಧರಿಸಿ ಸಿಂಹಾಸನದ ಮೇಲೆ ಕುಳಿತಿರುವ ಗುಲ್ಷನ್ ದೇವಯ್ಯ ಅವರ ಚಿತ್ರವನ್ನು ಹೊಂಬಾಳೆ ಫಿಲಮ್ಸ್ ತನ್ನ ಅಧಿಕೃತ ಇನ್ಸ್ಟಾಗ್ರಾಂ ಪೇಜ್‌ನಲ್ಲಿ ಹಂಚಿಕೊಂಡು ಸಿನೆಮಾದ ಬಗ್ಗೆ ಇನ್ನಷ್ಟು ಕುತೂಹಲ ಮೂಡಿಸಿದೆ.
ಬೆಂಗಳೂರಿನಲ್ಲಿ ಮಾಡೆಲಿಂಗ್ ಮಾಡುತ್ತಿದ್ದ ಗುಲ್ಷನ್ ದೇವಯ್ಯ ಪ್ರಸಾದ್ ಬಿದಪ್ಪ ಅವರ ಗರಡಿಯಲ್ಲಿ ಪಳಗಿದವರು. 2004 ರಲ್ಲಿ ಬಿಡುಗಡೆ ಆದ ಸಲ್ಮಾನ್ ಖಾನ್ರ ‘ದಿಲ್ ನೆ ಜಿಸೆ ಅಪ್ನಾ ಕಹಾ’ ಸಿನಿಮಾದ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡು ಮರೆಯಾಗಿದ್ದ ಗುಲ್ಷನ್ ದೇವಯ್ಯ 2010 ರಲ್ಲಿ ಬಂದ ಕಲ್ಕಿ ಕೊಚ್ಲಿನ್ ನಟಿಸಿ ಅನುರಾಗ್ ಕಶ್ಯಪ್ ನಿರ್ದೇಶಿಸಿದ್ದ ‘ದಿ ಗರ್ಲ್ ಇನ್ ಯೆಲ್ಲೊ ಬೂಟ್ಸ್’ ಸಿನಿಮಾ ಮೂಲಕ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರು. ಹೀಗೆ ಇನ್ನೂ ಅನೇಕ ಸಿನೆಮಾಗಳಲ್ಲಿ ಅವರು ಕಾಣಿಸಿಕೊಂಡು ಭರವಸೆ ಮೂಡಿಸಿದ್ದರು.
‘ಕಾಂತಾರ 1’ ಸಿನೆಮಾದಲ್ಲಿ ರಿಷಬ್ ಶೆಟ್ಟಿ ಜೊತೆಗೆ ರುಕ್ಮಿಣಿ ವಸಂತ್, ಮಲಯಾಳಂ ನಟ ಜಯರಾಂ ಹಾಗೂ ಗುಲ್ಷನ್ ದೇವಯ್ಯ ನಟಿಸುತ್ತಿರುವುದು ಖಾತ್ರಿ ಆಗಿದೆ. ಸಿನಿಮಾ ಇದೇ ವರ್ಷ ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಯಾಗುವ ಎಲ್ಲಾ ಸಾಧ್ಯತೆಗಳಿವೆ.