ಬೆಂಗಳೂರು: ಕನ್ನಡಿಗ ಕೆ. ಎಲ್ ರಾಹುಲ್ ಅವರ ಕ್ರಿಕೆಟ್ ಭವಿಷ್ಯ ಮುಗಿದೇ ಹೋಯಿತು ಎಂಬ ಕಡೆಗೆ ಚರ್ಚೆ ಸಾಗಿತ್ತು. ಅವರನ್ನು ಬೈಯುವವರೇ ಹೆಚ್ಚಿದ್ದರು. ಮೋಸಗಾರ, ನಿಷ್ಪ್ರಯೋಜಕ ಎಂದೆಲ್ಲ ಟೀಕೆಗಳು ಅವರಿಗೆ ಎದುರಾಗಿದ್ದವು. ಆದರೆ, ಚಾಂಪಿಯನ್ಸ್ ಟ್ರೋಫಿ ಫೈನಲ್ ಬಳಿಕ ಅವರ ಕುರಿತ ಈ ಎಲ್ಲ ಟೀಕೆಗಳನ್ನು ಮಾಡಿದವರು ಬಾಯಿ ಮುಚ್ಚಿ ಕುಳಿತಿದ್ದಾರೆ. ತಾವು ಏನು ಹಾಗೂ ತಂಡಕ್ಕೆ ತನ್ನ ಕೊಡುಗೆ ಏನು ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ.
ಅಂದ ಹಾಗೆ, ಭಾರತ ತಂಡ ಚಾಂಪಿಯನ್ಸ್ ಟ್ರೋಫಿ 2025 ಅನ್ನು ತನ್ನದಾಗಿಸಿಕೊಳ್ಳುವಲ್ಲಿ ಕೆ.ಎಲ್. ರಾಹುಲ್ ಪಾತ್ರ ವಹಿಸಿದ್ದಾರೆ. . ಬ್ಯಾಟ್ ಮತ್ತು ವಿಕೆಟ್ ಕೀಪಿಂಗ್ ಎರಡರಲ್ಲೂ ಅಮೋಘ ಪ್ರದರ್ಶನ ನೀಡಿದ ಅವರು, ಟೀಕಾಕಾರರ ಆಕ್ಷೇಪಣೆಗಳಿಗೆ ತಕ್ಕ ಉತ್ತರ ನೀಡಿದ್ದಾರೆ. ಟೂರ್ನಿಗೆ ಮುನ್ನ, ಅವರ ಫಾರ್ಮ್ ಮತ್ತು ದೈಹಿಕ ಸ್ಥಿತಿಯ ಕುರಿತು ಅನೇಕ ಪ್ರಶ್ನೆಗಳು ಎದ್ದಿದರೂ, ಎಲ್ಲವನ್ನೂ ಮೀರಿ ತಮ್ಮ ಶಾಂತ ಮತ್ತು ತಾಳ್ಮೆಯ ಆಟದ ಮೂಲಕ ದೇಶಕ್ಕಾಗಿ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ.

ಚಾಂಪಿಯನ್ಸ್ ಟ್ರೋಫಿ 2025ರಲ್ಲಿ ಕೆ.ಎಲ್. ರಾಹುಲ್ನ ಪ್ರದರ್ಶನ ಹೀಗಿದೆ
ಮಾರ್ಚ್ 9, 2025ರಂದು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ, ಭಾರತ 251 ರನ್ಗಳ ಗುರಿಯನ್ನು ಚೇಸ್ ಮಾಡಿ 4 ವಿಕೆಟ್ಗಳಿಂದ ಗೆದ್ದಿದೆ. ಈ ರೋಚಕ ವಿಜಯದಲ್ಲಿ ರಾಹುಲ್ ಮಹತ್ವದ ಪಾತ್ರ ವಹಿಸಿದ್ದರು. ಅವರು ಅಜೇಯ 34 ರನ್ ಗಳಿಸಿ, ರವೀಂದ್ರ ಜಡೇಜಾ ಜೊತೆಗೆ ತಂಡವನ್ನು ಗೆಲುವಿನ ದಡಕ್ಕೇರಿಸಿದ್ದರು. ವಿಜಯಲಕ್ಷ್ಮೀ ಯಾರಿಗೆ ಒಲಿಯಬೇಕು ಎಂಬ ಗೊಂದಲದಲ್ಲಿದ್ದ ಹೊತ್ತಿನಲ್ಲಿ, ರಾಹುಲ್ ಶಾಂತ ಮನಸ್ಥಿತಿಯಲ್ಲಿ ಆಡಿ ಗೆಲುವು ತಂದುಕೊಟ್ಟಿದ್ದಾರೆ. ಈ ಮೂಲಕ ತಂಡದ ವಿಶ್ವಾಸಾರ್ಹ ಆಟಗಾರ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧವೂ ಸಮಯೋಚಿತ ಆಟ
ಮಾರ್ಚ್ 4, 2025ರಂದು ಆಸ್ಟ್ರೇಲಿಯಾ ವಿರುದ್ಧ ನಡೆದ ಸೆಮಿಫೈನಲ್ನಲ್ಲಿ, ರಾಹುಲ್ ಅಜೇಯ 42 ರನ್ ಗಳಿಸಿ, ಭಾರತವನ್ನು ಫೈನಲ್ಗೆ ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು, . ಹಾರ್ದಿಕ್ ಪಾಂಡ್ಯ ಜೊತೆಗೆ ರಾಹುಲ್ ಉತ್ತಮ ಜೊತೆಯಾಟ ನೀಡಿದ್ದರಿಂದ ಭಾರತವು 264 ರನ್ ಗುರಿಯನ್ನು ಯಶಸ್ವಿಯಾಗಿ ಚೇಸಿಂಗ್ ಮಾಡಿತು. ಅವರು ಅಂತಿಮ ಹಂತದಲ್ಲಿ ತಂಡವನ್ನು ಮುನ್ನಡೆಸಿದ ರೀತಿಯು ಗಮನಾರ್ಹ.

ವಿಕೆಟ್ಕೀಪಿಂಗ್ ಕೌಶಲ
ಕೆ.ಎಲ್. ರಾಹುಲ್ ಕೇವಲ ಬ್ಯಾಟಿಂಗ್ ಮಾತ್ರವಲ್ಲ, ವಿಕೆಟ್ ಕೀಪಿಂಗ್ನಲ್ಲಿಯೂ ಅದ್ಭುತ ಪ್ರದರ್ಶನ ನೀಡಿದ್ದಾರೆ ಎಂಬುದು ವಿಶ್ಲೇಷಣೆ ಅರ್ಹ . 4 ಪಂದ್ಯಗಳಲ್ಲಿ 6 ಬ್ಯಾಟರ್ಗಳನ್ನು ಅವರು ಔಟ್ ಮಾಡಿದ್ದಾರೆ, (5 ಕ್ಯಾಚ್, 1 ಸ್ಟಂಪಿಂಗ್ ಸೇರಿ ). ಈ ಮೂಲಕ ಟೂರ್ನಿಯ ಅತ್ಯುತ್ತಮ ವಿಕೆಟ್ ಕೀಪರ್ಗಳ ಪಟ್ಟಿಯ ಅಗ್ರ ಸ್ಥಾನ ಪಡೆದಿದ್ದಾರೆ. ಅವರ ಚುರುಕುತನ , ವೇಗ ಮತ್ತು ಬೌಲರ್ಗಳಿಗೆ ನೀಡಿದ ಬೆಂಬಲ ತಂಡಕ್ಕೆ ದೊಡ್ಡ ಪ್ರಯೋಜನ ನೀಡಿದೆ.
ಟೀಕಾಕಾರರ ಬಾಯಿ ಮುಚ್ಚಿಸಿದ ರಾಹುಲ್
ಟೂರ್ನಿಯ ಮೊದಲು, ಕೆ.ಎಲ್. ರಾಹುಲ್ ಅವರ ಫಾರ್ಮ್ ಮತ್ತು ಗಾಯದ ಸಮಸ್ಯೆ ಕುರಿತಂತೆ ಹಲವಾರು ಪ್ರಶ್ನೆಗಳು ಹುಟ್ಟಿಕೊಂಡಿದ್ದವು. ಆದರೆ, ಅವರು ತಾವು ಇನ್ನೂ ಟೀಮ್ ಇಂಡಿಯಾದ ಪ್ರಮುಖ ಆಟಗಾರ ಎಂದು ಸಾಬೀತುಪಡಿಸಿದ್ದಾರೆ. ಹೈ-ಪ್ರೆಶರ್ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ ಅವರು, ಟೀಮ್ ಇಂಡಿಯಾದ ಚಾಂಪಿಯನ್ಸ್ ಟ್ರೋಫಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ತಮ್ಮನ್ನು ತೆಗಳುತ್ತಿದ್ದವರ ಬಾಯಿ ಮುಚ್ಚಿಸಿದ್ದಾರೆ.