ಬೆಂಗಳೂರು : ಲಕ್ನೊ ಸೂಪರ್ ಜೈಂಟ್ಸ್ ತಂಡದ ನಾಯಕ ಕೆ. ಎಲ್ ರಾಹುಲ್ (KL Rahul) ಫ್ರಾಂಚೈಸಿ ಮಾಲೀಕ ಸಂಜೀವ್ ಗೋಯೆಂಕಾರನ್ನು ಭೇಟಿ ಮಾಡಿದ್ದು, ಹಲವಾರು ಚರ್ಚೆಗಳಿಗೆ ಕಾರಣವಾಗುತ್ತಿದೆ.
ಗೋಯೆಂಕಾ ಅವರೊಂದಿಗೆ ರಾಹುಲ್ ಆವರಿಗೆ ಭಿನ್ನಾಭಿಪ್ರಾಯ ಇದೆ ಎಂಬುವುದು ಕಳೆದ ಬಾರಿಯ ಐಪಿಎಲ್ ನಲ್ಲಿ ಸದ್ದು ಮಾಡಿತ್ತು. ಹೀಗಾಗಿ ಐಪಿಎಲ್ 2025ಕ್ಕೆ ಮುಂಚಿತವಾಗಿ ಫ್ರಾಂಚೈಸಿ ತೊರೆಯುತ್ತಾರೆ ಎಂದು ಊಹಾಪೋಹಗಳು ಕೇಳಿ ಬಂದಿದ್ದವು.
ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಲಕ್ನೋ ಹೀನಾಯ ಸೋಲಿನ ನಂತರ ಮಾಲೀಕರು ಮೈದಾನದಲ್ಲಿ ನಾಯಕನನ್ನು ಸಾರ್ವಜನಿಕವಾಗಿ ಬೈದಿದ್ದರು. 166 ರನ್ ಗಳ ಗುರಿ ಬೆನ್ನತ್ತಿದ ಸನ್‌ರೈಸರ್ಸ್ ಹೈದರಾಬಾದ್ 9.4 ಓವರ್ ಗಳಲ್ಲಿ 1 ವಿಕೆಟ್ ಕಳೆದುಕೊಂಡು ಗೆದ್ದು ಬೀಗಿತ್ತು. ಹೀಗಾಗಿ ಆಕ್ರೋಶಗೊಂಡ ತಂಡದ ಮಾಲೀಕ ಗೋಯೆಂಕಾ ಪಂದ್ಯ ಮುಗಿದ ಕೂಡಲೇ ಮೈದಾನದಲ್ಲಿ ಕೆಎಲ್ ರಾಹುಲ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಹೀಗಾಗಿ ರಾಹುಲ್ ತಂಡ ತೊರೆಯಲಿದ್ದಾರೆ ಎಂಬ ಮಾತುಗಳು ಮುನ್ನೆಲೆಗೆ ಬಂದಿದ್ದವು.
ಆದರೆ, ಸದ್ಯದ ಬೆಳವಣಿಗೆಯಲ್ಲಿ ಗೋಯೆಂಕಾ ಅವರೊಂದಿಗೆ ಸಭೆ ನಡೆಸಲು ಫ್ರಾಂಚೈಸಿಯ ಕೋಲ್ಕತಾ ಕಚೇರಿಗೆ ರಾಹುಲ್ ಭೇಟಿ ನೀಡಿದ್ದರು ಎಂದು ವರದಿಯಾಗಿದೆ. ಈ ವೇಳೆ ಒಂದು ಗಂಟೆಗಳ ಕಾಲ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಲಕ್ನೋ ಮೂಲದ ತಂಡವು ಕೆಎಲ್ ರಾಹುಲ್ ಅವರನ್ನು ತನ್ನ ತಂಡದಲ್ಲಿ ಹೊಂದಲು ಉತ್ಸುಕವಾಗಿದೆ. ರಾಹುಲ್ 2022ರಿಂದ ಲಕ್ನೋ ತಂಡದಲ್ಲಿ ಆಡುತ್ತಿದ್ದಾರೆ. ಈ ವೇಳೆ ರಾಹುಲ್ 38 ಪಂದ್ಯಗಳಲ್ಲಿ 2 ಶತಕ ಮತ್ತು 10 ಅರ್ಧಶತಕಗಳ ಸಹಾಯದಿಂದ 1410 ರನ್ ಗಳಿಸಿದ್ದಾರೆ. ಐಪಿಎಲ್‌ನಲ್ಲಿ 1000 ರನ್ ಗಳಿಸಿದ ಏಕೈಕ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.