ಬೆಂಗಳೂರು: ಹಲವು ಪ್ರಥಮಗಳನ್ನೊಳಗೊಂಡಿರುವ ಸತಿ ಸುಲೋಚನ ಚಿತ್ರ ಮತ್ತೆ ಮರು ಸೃಷ್ಟಿ ಪಡೆದುಕೊಂಡಿದೆ.
ಪಿ.ಶೇಷಾದ್ರಿ ನಿರ್ದೇಶನ ಹಾಗೂ ಸೃಜನ್ ಲೋಕೇಶ್ ನಿರ್ಮಾಣದಲ್ಲಿ ಈ ಚಿತ್ರ ಮೂಡಿ ಬರುತ್ತಿದೆ. ಈ ಚಿತ್ರವು ಮಾರ್ಚ್ 3ರಂದು ಬಿಡುಗಡೆಯಾಗಲಿದೆ ಎಂದು ಚಿತ್ರ ತಂಡ ಹೇಳಿದೆ.
3.3.1934 ಅಂದರೆ ಸರಿಯಾಗಿ 91 ವರ್ಷಗಳ ಹಿಂದೆ ಕನ್ನಡದ ಮೊದಲ ವಾಕ್ಚಿತ್ರ “ಸತಿ ಸುಲೋಚನ” ಬಿಡುಗಡೆಯಾಗಿತ್ತು. ನಾಟಕದಲ್ಲಿ ಕಲಾವಿದರ ಅಭಿನಯವನ್ನು ನೋಡಿದ ಜನರು ತೆರೆಯ ಮೇಲೆ ಮೊದಲ ವಾಕ್ಚಿತ್ರವನ್ನು ನೋಡಿ ಮೂಕ ವಿಸ್ಮಿತರಾದರು.
ಹಿರಿಯ ನಟ ಆರ್. ನಾಗೇಂದ್ರರಾಯರ ಸಲಹೆ ಮೇರೆಗೆ ರಾಜಸ್ಥಾನ ಮೂಲದ ಚಮನ್ ಲಾಲ್ ಡೊಂಗಾಜಿ ನಿರ್ಮಾಣ ಮಾಡಿದ ಈ ಚಿತ್ರವನ್ನು ವೈ.ವಿ.ರಾವ್ ನಿರ್ದೇಶನ ಮಾಡಿದ್ದರು. ಖ್ಯಾತ ನಟ ಲೋಕೇಶ್ ತಂದೆ ಹಾಗೂ ಸೃಜನ್ ಲೋಕೇಶ್ ತಾತಾ ಸುಬ್ಬಯ್ಯ ನಾಯ್ಡು ಈ ಚಿತ್ರದ ನಾಯಕನಾಗಿ, ತ್ರಿಪುರಾಂಬ ನಾಯಕಿಯಾಗಿ ಅಭಿನಯಿಸಿದ್ದರು. 91 ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ಈ ಚಿತ್ರದ ಯಾವುದೇ ವಿಡಿಯೋ ತುಣುಕುಗಳು ಲಭ್ಯವಿಲ್ಲ. ಕೇವಲ ಕೆಲವೆ ಕೆಲವು ಸ್ಥಿರಚಿತ್ರಗಳಷ್ಟೇ ಇದೆ.
ಕನ್ನಡದ ಮೊದಲ ವಾಕ್ಚಿತ್ರ ಬಿಡುಗಡೆಯಾಗಿ 91 ವರ್ಷಗಳಾಗಿವೆ. 3.3.1934 ರಂದು ಸಂಜೆ 7.30ಕ್ಕೆ ಬೆಂಗಳೂರಿನ ಪ್ಯಾರಾಮೌಂಟ್ ಚಿತ್ರಮಂದಿರದಲ್ಲಿ ಈ ಚಿತ್ರ ಬಿಡುಗಡೆಯಾಗಿತ್ತು. “ಸತಿ ಸುಲೋಚನ” ರಾಮಾಯಣದ ಒಂದು ಉಪಕಥೆ. ಬೆಳ್ಳಾವೆ ನರಹರಿ ಶಾಸ್ತ್ರಿಗಳು ಬರೆದಿದ್ದ ಈ ನಾಟಕವನ್ನು ವೈ.ವಿ.ರಾವ್ ಅವರು ಸಿನಿಮಾ ರೂಪಕ್ಕೆ ತಂದರು.
ಹಿರಿಯ ನಿರ್ದೇಶಕರಾದ ಎಸ್ ವಿ ರಾಜೇಂದ್ರ ಸಿಂಗ್ ಬಾಬು, ಗಿರೀಶ್ ಕಾಸರವಳ್ಳಿ, ಯೋಗರಾಜ್ ಭಟ್, ಹಿರಿಯ ಪತ್ರಕರ್ತೆ ಡಾ|ವಿಜಯ, ನಟಿ ಜಯಮಾಲ, ರಂಗತಜ್ಞ ಶ್ರೀನಿವಾಸ್ ಜಿ ಕಪ್ಪಣ್ಣ, ಪತ್ರಕರ್ತ ಚ.ಹ.ರಘುನಾಥ್ ಮುಂತಾದವರು ಈ ಸಂದರ್ಭದಲ್ಲಿ ಮಾತನಾಡಿ ಸೃಜನ್ ಲೋಕೇಶ್ ಹಾಗೂ ಪಿ.ಶೇಷಾದ್ರಿ ಪ್ರಯತ್ನ ಯಶಸ್ವಿಯಾಗಲೆಂದು ಶುಭ ಕೋರಿದರು.