ಬೆಂಗಳೂರು: ಕನ್ನಡ ಮಾತನಾಡು ಅಂತ ಹೇಳಿದ್ದಕ್ಕೆ ಪಾಪಿಯೊಬ್ಬ ವೃದ್ಧ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಸಿಲಿಕಾನ್ ಸಿಟಿ ಬಿವಿಕೆ ಅಯ್ಯಂಗಾರ್ ರಸ್ತೆಯ ಅಂಗಡಿಯೊಂದರಲ್ಲಿ ಈ ಘಟನೆ ನಡೆದಿದೆ. 52 ವರ್ಷದ ವೃದ್ಧ ವ್ಯಕ್ತಿಯನ್ನು ಅಂಗಡಿಯಲ್ಲಿದ್ದ ವ್ಯಕ್ತಿ ಥಳಿಸಿದ್ದಾನೆ ಎನ್ನಲಾಗಿದೆ. ದಾಬಸ್ ಪೇಟೆ ನಿವಾಸಿಯಾಗಿರುವ ಶಾಮಿಯಾನ ಟೆಂಟ್ ಹೌಸ್ ಮಾಲೀಕರಾದ ಸಯ್ಯದ್ ರಫೀಕ್ ಹಲ್ಲೆಗೆ ಒಳಗಾಗಿರುವ ವ್ಯಕ್ತಿ. ಘಟನೆಗೆ ಸಂಬಂಧಿಸಿದಂತೆ ಮಮತಾ ಆರ್ಟ್ಸ್ ಸ್ಟೋರ್ ನ ಉದ್ಯೋಗಿಗಳಾದ ಶೇಷ ಕುಮಾರ್ ಮತ್ತು ಅರವಿಂದ್ ಹಲ್ಲೆ ನಡೆಸಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸೆ 30ರಂದು ಚಿಕ್ಕಪೇಟೆಯಲ್ಲಿರುವ ಮಮತಾ ಸ್ಟೋರ್ಸ್ ಗೆ ಪತ್ನಿ ಜತೆ ತೆರಳಿದ್ದ ರಫೀಕ್, ದೀಪದ ಕಂಬದ ವಿನ್ಯಾಸಗಳನ್ನು ತೋರಿಸುವಂತೆ ಕೇಳಿದ್ದರು. ‘ಕಂಚಿನ ದೀಪದ ಕಂಬ’ ಎಂದು ಕನ್ನಡದಲ್ಲಿ ಕೇಳಿದ್ದಾರೆ. ಅದಕ್ಕೆ ಅಂಗಡಿಯವ ಅರ್ಥವಾಗಿಲ್ಲ ಎಂದಿದ್ದಾನೆ. ಆಗ ಅದನ್ನು ವಿವರಿಸಲು ಮುಂದಾಗಿದ್ದಾರೆ. ಆಗಲೂ ಅವರಿಗೆ ಸರಿಯಾಗಿ ಅರ್ಥವಾಗಿಲ್ಲ. ಹೀಗಾಗಿ ಇಲ್ಲಿ ವ್ಯವಹಾರ ಮಾಡಬೇಕೆಂದರೆ ಕನ್ನಡ ಕಲಿಯಿರಿ ಎಂದು ವೃದ್ಧ ವ್ಯಕ್ತಿ ಹೇಳಿದ್ದಾರೆ.
ಆಗ ಅಂಗಡಿಯವ ಹಾಗೂ ವೃದ್ಧ ಗ್ರಾಹಕರ ಮಧ್ಯೆ ಜಗಳ ನಡೆದಿದೆ. ಆಗ ಅಂಗಡಿಯವರು ಥಳಿಸಿದ್ದಾರೆ. ನನ್ನ ತಲೆಯಿಂದ ರಕ್ತ ಸುರಿಯತೊಡಗಿದ್ದರಿಂದ ಅಂಗಡಿಯಿಂದ ಹೊರಗೆ ಓಡಿ ಬಂದು ಜನರ ಸಹಾಯ ಕೋರಿದೆ. ನನ್ನ ಪತ್ನಿಯ ಮೇಲೆಯೂ ಹಲ್ಲೆ ನಡೆಸಿದ್ದಾರೆ ಎಂದು ವೃದ್ಧ ವ್ಯಕ್ತಿ ಆರೋಪಿಸಿದ್ದಾರೆ. ಸದ್ಯ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.