ದಕ್ಷಿಣ ಭಾರತ ಚಿತ್ರರಂಗದ ಪ್ರತಿಷ್ಠಿತ ಸೈಮಾ-2024 (ಸೌತ್ ಇಂಡಿಯಾ ಇಂಟರ್‌ನ್ಯಾಷನಲ್ ಮೂವೀ ಅವಾರ್ಡ್ಸ್) ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿದ್ದು, ಕನ್ನಡದ ಸಪ್ತರ ಸಾಗರದಾಚೆ ಚಿತ್ರ 6 ಹಾಗೂ ದರ್ಶನ್ ಅಭಿನಯದ ಕಾಟೇರ ಚಿತ್ರ ನಾಲ್ಕು ಪ್ರಶಸ್ತಿಗಳನ್ನು ಬಾಚಿಕೊಂಡಿದೆ.
ಈ ಪ್ರಶಸ್ತಿ ಪ್ರದಾನ ಸಮಾರಂಭವು ದುಬೈನಲ್ಲಿ ಅದ್ದೂರಿಯಾಗಿ ನಡೆಯಿತು. ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯ ಚಿತ್ರಗಳನ್ನು ವಿವಿಧ ವಿಭಾಗಗಳಲ್ಲಿ ಆಯ್ಕೆ ಮಾಡಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸ್ಯಾಂಡಲ್ ವುಡ್ ನಿಂದ ಡಾ. ಶಿವರಾಜಕುಮಾರ್, ಸುದೀಪ್, ವಿಜಯ್ ಕುಮಾರ್, ರಾಕ್ ಲೈನ್ ವೆಂಕಟೇಶ್, ಧನಂಜಯ್, ರಕ್ಷಿತ್ ಶೆಟ್ಟಿ ಸೇರಿದಂತೆ ಹಲವು ನಟ- ನಟಿಯರು ಭಾಗವಹಿಸಿದ್ದರು.
ಪ್ರಶಸ್ತಿ ಸುತ್ತಿನ ವಿವಿಧ 19 ವಿಭಾಗಗಳಲ್ಲಿ ಹೇಮಂತ್ ರಾವ್- ರಕ್ಷಿತ್ ಶೆಟ್ಟಿ ಕಾಂಬಿನೇಷನ್ ನಲ್ಲಿ ಮೂಡಿ ಬಂದಿದ್ದ ‘ಸಪ್ತ ಸಾಗರದಾಚೆ ಎಲ್ಲೋ- ಸೈಡ್-ಎ’ ಸಿನಿಮಾಕ್ಕೆ ಆರು ಹಾಗೂ ತರುಣ್ ಸುಧೀರ್ ನಿರ್ದೇಶನದ ‘ಕಾಟೇರ’ಗೆ ನಾಲ್ಕು ಪ್ರಶಸ್ತಿಗಳು ಒಲಿದು ಬಂದವು.
ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿ ಕಾಟೇರ ಪಾಲಾಗಿದೆ. ಅತ್ಯುತ್ತಮ ಸಂಗೀತ ನಿರ್ದೇಶನ ಪ್ರಶಸ್ತಿ ಹರಿಕೃಷ್ಣಗೆ ಲಭಿಸಿದೆ. ಬೆಸ್ಟ್ ಡೆಬ್ಯೂ ಆಕ್ಟ್ರೆಸ್ ಅವಾರ್ಡ್ ಆರಾಧನಾ ಪಾಲಾಗಿದೆ. ‘ಪಸಂದಾಗವ್ನೇ..’ ಹಾಡನ್ನ ಹಾಡಿದ ಮಂಗ್ಲಿಗೆ ಅತ್ಯುತ್ತಮ ಗಾಯಕಿ ಸೈಮಾ ಅವಾರ್ಡ್ ಒಲಿದು ಬಂದಿದೆ.
ಈ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಹಲವಾರು ದಿಗ್ಗಜ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಬಾಲಿವುಡ್ ತಾರೆಯರು ಕೂಡ ಆಗಮಿಸಿದ್ದರು. ಅಲ್ಲು ಅರವಿಂದ್, ಬೋನಿ ಕಪೂರ್, ಕಬೀರ್ ಖಾನ್, ರವಿಶಂಕರ್, ರಾನಾ ದಗ್ಗುಬಾಟಿ, ಶ್ರುತಿ ಹಾಸನ್ ಸೇರಿದಂತೆ ಖ್ಯಾತನಾಮರು ಇದ್ದರು.