ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘ, ಬಿಬಿಎಂಪಿ ನೌಕರರ ಕನ್ನಡ ಸಂಘದ ವತಿಯಿಂದ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಅಲ್ಲದೇ, ಉತ್ತರಾಖಂಡ ರಾಜ್ಯದ ಹರಿದ್ವಾರ ಮತ್ತು ಋಷಿಕೇಶದ ಗಂಗಾ ನದಿ ತೀರದಲ್ಲಿ ನ.16ರಂದು ನಡೆಯಲಿರುವ ರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ ಸಮಾರಂಭದ ಲಾಂಛನ ಮತ್ತು ಪೋಸ್ಟರ್ ಬಿಡುಗಡೆ ಕಾರ್ಯಕ್ರಮವೂ ನಡೆಯಿತು.
ಈ ವೇಳೆ ಮುಖ್ಯ ಆಡಳಿತಗಾರ ಎಸ್.ಆರ್. ಉಮಾಶಂಕರ್ ಮಾತನಾಡಿ, ಬೆಂಗಳೂರು ದೇಶದ ಪ್ರಮುಖ ನಗರ. ರಾಜ್ಯದ ಹೆಮ್ಮೆಯ ನಗರವಾಗಿದೆ. ಕನ್ನಡ ಭಾಷೆಯನ್ನು ಎತ್ತಿಹಿಡಿಯುವ ಕೆಲಸವನ್ನು ಬಿಬಿಎಂಪಿ ಉತ್ತಮವಾಗಿ ಮಾಡುತ್ತಿದೆ. ಕನ್ನಡ ಆಡಳಿತ ಭಾಷೆಯಾಗಿದೆ. 6.5 ಕೋಟಿ ಜನರ ಮನದಾಳದ ಭಾಷೆಯಾಗಿದೆ. ಕನ್ನಡ ಭಾಷೆಗೆ 8 ಜ್ಞಾನಪೀಠ ಪ್ರಶಸ್ತಿ ಬಂದಿವೆ. ರಾಜ್ಯದ ಬೆಂಗಳೂರು ನಗರದಲ್ಲಿ ಕನ್ನಡ ಭಾಷೆ ಬಳಕೆ ಕಡಿಮೆ ಇರಬಹುದು. ಹಳ್ಳಿ, ಗ್ರಾಮ, ತಾಲ್ಲೂಕು ಮಟ್ಟದಲ್ಲಿ ಕನ್ನಡ ಭಾಷೆ ಹೆಚ್ಚು ಬಳಕೆಯಾಗುತ್ತಿದೆ. ನಾಮಫಲಕಗಳಲ್ಲಿ ಕನ್ನಡ ಭಾಷೆ ಬಳಕೆ ಕಡ್ಡಾಯವಾಗಿ ಜಾರಿಗೆ ತರಲಾಗುತ್ತಿದೆ ಎಂದಿದ್ದಾರೆ.
ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾತನಾಡಿ, ಈ ವರ್ಷ ವಿಶೇಷವಾಗಿ ರಾಜ್ಯದಲ್ಲಿ ಕನ್ನಡ ರಾಜ್ಯೋತ್ಸವ ಅಚರಿಸಲಾಗುತ್ತಿದೆ. ಉಪಮುಖ್ಯಮಂತ್ರಿ ಅವರು ಸಾಮಾಜಿಕ ಜಾಲತಾಣದ ಮೂಲಕ ಐಟಿ- ಬಿಟಿ ಮತ್ತು ವಾಣಿಜ್ಯ ಮಳಿಗೆ ಕನ್ನಡ ಬಾವುಟ ಪ್ರದರ್ಶನ ಮಾಡಬೇಕು ಎಂದು ಕಟ್ಟಪ್ಪಣೆ ಹೊರಡಿಸಿದ್ದಾರೆ. ರಾಜ್ಯದಲ್ಲಿ ಕನ್ನಡ ಭಾಷೆಯನ್ನು ಸಂಪೂರ್ಣ ಬಳಕೆ ಮಾಡಬೇಕು. ಕನ್ನಡ ಭಾಷೆ ಬಳಸಿ, ಬೆಳಸಬೇಕು, ಬಿಬಿಎಂಪಿಯಲ್ಲಿ ಸಂಪೂರ್ಣ ಆಡಳಿತ ವ್ಯವಹಾರ ಕನ್ನಡ ನಡೆಯುತ್ತದೆ ಎಂದು ಹೇಳಿದ್ದಾರೆ.

ಮಾಜಿ ಮಹಾಪೌರ ಜೆ.ಹುಚ್ಚಪ್ಪ ಮಾತನಾಡಿ, ಕನ್ನಡ ಭಾಷೆ ಉಳಿಸಿ, ಬೆಳಸಲು ಅಧಿಕಾರಿಗಳು ಪರಿಶ್ರಮ ಮುಖ್ಯವಾಗಿದೆ. ಕನ್ನಡದಲ್ಲಿ ನಾಮಫಲಕವನ್ನು ಕಡ್ಡಾಯವಾಗಿ ಕನ್ನಡ ಬಳಕೆ ಮಾಡಿ ಎಂದು ನೋಟಿಸ್ ಕೊಡಬೇಕು. ನೋಟಿಸ್ ಗೆ ಮಣಿಯದಿದ್ದರೆ ವಾಣಿಜ್ಯ ಮಳಿಗೆಗಳಿಗೆ ಬೀಗ ಹಾಕಬೇಕು ಎಂದಿದ್ದಾರೆ.
ಅಧ್ಯಕ್ಷ ಎ.ಅಮೃತ್ ರಾಜ್ ಮಾತನಾಡಿ, ಕನ್ನಡ ಭಾಷೆ ಉಳಿಸಿ, ಬೆಳಸಬೇಕು. ಕನ್ನಡ ಭಾಷೆ ವಿಶ್ವ ಭಾಷೆಯಾಗಬೇಕು ಎಂಬ ನಿಟ್ಟಿನಲ್ಲಿ ಸಂಘದ ವತಿಯಿಂದ ಉತ್ತರಖಾಂಡ್ ರಾಜ್ಯದಲ್ಲಿ ಅದ್ದೂರಿಯಾಗಿ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ನ. 16ರಂದು ಹಮ್ಮಿಕೊಳ್ಳಲಾಗಿದೆ ಎಂದಿದ್ದಾರೆ.
ಈ ವೇಳೆ ಕನ್ನಡ ಧ್ವಜಾರೋಹಣ ಮಾಡಿ ಮೇರುನಟ ಡಾ. ರಾಜಕುಮಾರ್, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಲಾಯಿತು. ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್, ಡಾ. ಕೆ. ಹರೀಶ್ ಕುಮಾರ್, ಅವಿನಾಶ್ ಮೆನನ್ ರಾಜೇಂದ್ರನ್, ಉಪ ಆಯುಕ್ತರಾದ ಮಂಜುನಾಥ ಸ್ವಾಮಿ, ಪ್ರಧಾನ ಅಭಿಯಂತರರಾದ ಪ್ರಹ್ಲಾದ್, ಜಂಟಿ ಆಯುಕ್ತ ಲಕ್ಷ್ಮಿದೇವಿ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಎ.ಅಮೃತ್ ರಾಜ್, ಬಿಬಿಎಂಪಿ ನೌಕರರ ಕನ್ನಡ ಸಂಘದ ಅಧ್ಯಕ್ಷ ಸಾಯಿಶಂಕರ್ ಇದ್ದರು.
ಸಂಘದ ಪದಾಧಿಕಾರಿ ಬಾಬಣ್ಣ, ಡಾ.ಶೋಭಾ, ಡಿ.ರಾಮಚಂದ್ರ, ಕೆ.ಜಿ.ರವಿ, ರುದ್ರೇಶ್ ಬಿ., ಸೋಮಶೇಖರ್ ಎನ್.ಎಸ್., ಹೆಚ್.ಕೆ.ತಿಪ್ಪೇಶ್, ಹರೀಶ್ ಹೆಚ್.ಬಿ., ನರಸಿಂಹ, ಮಂಜೇಗೌಡ, ಆರ್.ರೇಣುಕಾಂಬ,ಎಸ್.ಜಿ.ಸುರೇಶ್, ಮಂಜುನಾಥ್, ಉಮೇಶ್ ವಿ, ಸಂತೋಷ್ ಕುಮಾರ್ ನಾಯ್ಕ್, ಶ್ರೀಧರ್, ಸಂತೋಷ್ ಕುಮಾರ್ ಇದ್ದರು.