ಸಿನಿಮಾ ಲೋಕದಲ್ಲಿ ರಾಷ್ಟ್ರ ಮಟ್ಟದ ಪ್ರಶಸ್ತಿ ಸಿಗುವುದು ಕನ್ನಡಿಗರಿಗೆ ಕನಸಾಗಿಯೇ ಉಳಿದಿತ್ತು. ಕನ್ನಡಿಗರಿಗೆ ಪ್ರಶಸ್ತಿ ಸಿಗದೆ ದಶಕಗಳೇ ಕಳೆದಿದ್ದವು. ಆದರೆ, ಸದ್ಯ ಆ ಕನಸನ್ನು ನಟ ರಿಷಬ್ ಶೆಟ್ಟಿ ನನಸು ಮಾಡಿದ್ದಾರೆ.
ನಟ ರಿಷಬ್ ಶೆಟ್ಟಿಗೆ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ದೊರೆತಿದೆ. ‘ಕಾಂತಾರ’ ಸಿನಿಮಾದ ಅತ್ಯುತ್ತಮ ನಟನೆಗೆ ರಿಷಬ್ ಶೆಟ್ಟಿಗೆ ಈ ರಾಷ್ಟ್ರ ಪ್ರಶಸ್ತಿ ಸಂದಿದೆ. ಈ ಪ್ರಶಸ್ತಿಗಾಗಿ ರಿಷಬ್ ಶೆಟ್ಟಿಗೆ ಮಲಯಾಳಂ ನಟ ಮಮ್ಮುಟಿ, ಹಿಂದಿಯ ವಿಕ್ರಾಂತ್ ಮೆಸ್ಸಿ ಸೇರಿದಂತೆ ಹಲವು ನಟರಿಂದ ತೀವ್ರ ಸ್ಪರ್ಧೆ ಇತ್ತು. ಆದರೆ, ಕೊನೆಗೆ ಈ ಪ್ರಶಸ್ತಿ ರಿಷಬ್ ಶೆಟ್ಟಿ ಪಾಲಾಗಿದೆ.
ಕನ್ನಡಕ್ಕೆ ಮೊದಲ ಬಾರಿಗೆ 1975ರಲ್ಲಿ ಚೋಮನ ದುಡಿ ಚಿತ್ರದ ನಟನೆಗೆ “ಅತ್ಯುತ್ತಮ ನಟ” ರಾಷ್ಟ್ರ ಪ್ರಶಸ್ತಿಯನ್ನು ಎಂ.ವಿ. ವಾಸುದೇವ್ ರಾವ್ ಅವರು ತಂದು ಕೊಟ್ಟಿದ್ದರು. ನಂತರದಲ್ಲಿ ನಟ ಕಮಲ್ ಹಾಸನ್ ಅವರ ಸಹೋದರ ಚಾರು ಹಾಸನ್ ಗೆ ಕನ್ನಡದ ‘ತಬರನ ಕತೆ’ ಸಿನಿಮಾದಲ್ಲಿನ ನಟನೆಗೆ “ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ” ದೊರೆತಿತ್ತು. ಆನಂತರ ‘ನಾನು ಅವನಲ್ಲ ಅವಳು’ ಸಿನಿಮಾದ ಅತ್ಯುತ್ತಮ ನಟನೆಗೆ ಸಂಚಾರಿ ವಿಜಯ್ ಗೆ ಅತ್ಯುತ್ತಮ ನಟ ಪ್ರಶಸ್ತಿ ದೊರೆತಿತ್ತು. ಆನಂತರದಲ್ಲಿ ಯಾವುದೇ ಕನ್ನಡದ ನಟರಿಗೆ ರಾಷ್ಟ್ರ ಪ್ರಶಸ್ತಿ ದೊರೆತಿರಲಿಲ್ಲ. ಈಗ ರಿಷಬ್ ಶೆಟ್ಟಿ ಈ ಪ್ರಶಸ್ತಿಗೆ ಭಾಜನರಾಗಿದ್ದು, ಕನ್ನಡಕ್ಕೆ ಹೆಮ್ಮೆಯ ವಿಷಯವಾಗಿದೆ.
ರಿಷಬ್ ಶೆಟ್ಟಿ ‘ಕಾಂತಾರ’ ಚಿತ್ರವನ್ನು ನಿರ್ದೇಶಿಸಿ, ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ನಾಯಕ ನಟನಾಗಿ ನಟಿಸಿದ್ದಾರೆ. ಜವಾಬ್ದಾರಿಯುತ, ಸಿಡುಕು ಸ್ವಭಾವದ, ತಮಾಷೆ ಸ್ವಭಾವದ ಕಾಡುಬೆಟ್ಟು ಶಿವನ ಪಾತ್ರದಲ್ಲಿ ನಟಿಸಿದ್ದಾರೆ. ಅದೇ ಸಿನಿಮಾದಲ್ಲಿ ದೈವದ ವೇಷಧಾರಿಯಾಗಿ ಅಂತಿಮ ದೃಶ್ಯಗಳಲ್ಲಿ ಗುಳಿಗ ಮೈಮೇಲೆ ಬಂದಾಗಿನ ಅವರ ಅದ್ಭುತ ನಟನೆ ಎಲ್ಲರನ್ನೂ ಆಕರ್ಷಿಸಿತ್ತು. ಕಳೆದ ವರ್ಷ ರಾಷ್ಟ್ರ ಪ್ರಶಸ್ತಿಯು ಪುಷ್ಪ ಸಿನಿಮಾದ ಅಲ್ಲು ಅರ್ಜುನ್ ಅವರಿಗೆ ಸಂದಿತ್ತು. ಈ ಬಾರಿ ರಿಷಬ್ ಶೆಟ್ಟಿ ಪಾಲಾಗಿದೆ. ಸಣ್ಣ ಪುಟ್ಟ ಪಾತ್ರಗಳಿಂದ ಚಿತ್ರರಂಗಕ್ಕೆ ಕಾಲಿಟ್ಟಿರುವ ರಿಷಬ್ ಶೆಟ್ಟಿ ಇಂದು ರಾಷ್ಟ್ರ ಪ್ರಶಸ್ತಿ ಗಳಿಸಿದ್ದಾರೆ.
ಕನ್ನಡದ ಕೆಜಿಎಫ್ ಚಾಪ್ಟರ್-2 ಕೂಡ ಅತ್ಯುತ್ತಮ ಆ್ಯಕ್ಷನ್ ಸಿನಿಮಾ ಪ್ರಶಸ್ತಿ ಬಾಚಿಕೊಂಡಿದೆ. ತಿರುಚಿತ್ರಾಂಬಲಂ’ ಚಿತ್ರದ ಅಭಿನಯಕ್ಕಾಗಿ ಬಹುಭಾಷಾ ನಟಿ ನಿತ್ಯಾ ಮೆನನ್ ಹಾಗೂ ಕಚ್ ಎಕ್ಸ್ ಪ್ರೆಸ್ ಚಿತ್ರದ ಅಭಿನಯಕ್ಕಾಗಿ ಮಾನಸಿ ಪರೇಖ್ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ‘ಉಂಚೈ’ ಚಿತ್ರದ ನಿರ್ದೇಶನಕ್ಕಾಗಿ ಸೂರಜ್ ಬರ್ಜಾತ್ಯ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಗಳಿಸಿದ್ದಾರೆ. ‘ಪೊನ್ನಿಯಿನ್ ಸೆಲ್ವನ್ 1’, ‘ಕೆಜಿಎಫ್ 2’, ‘ಬ್ರಹ್ಮಾಸ್ತ್ರ ‘ಮತ್ತು ‘ಅಪರಾಜಿತೋ’ ಚಿತ್ರಗಳು ಸಮಾರಂಭದಲ್ಲಿ ಪ್ರಶಸ್ತಿ ಗೆದ್ದ ಇನ್ನಿತರ ಚಿತ್ರಗಳಾಗಿವೆ.
1954 ರಲ್ಲಿ ಮೊದಲ ಬಾರಿಗೆ ರಾಷ್ಟ್ರ ಪ್ರಶಸ್ತಿ ನೀಡುವ ಕಾರ್ಯ ಆರಂಭವಾಯಿತು. ಈಗ ಇದು 70ನೇ ಆವೃತ್ತಿಗೆ ಬಂದು ನಿಂತಿದೆ. ಹಿಂದೆ ವಿವಿಧ ಪ್ರಾದೇಶಿಕ ಭಾಷೆಗಳ ಅತ್ಯುತ್ತಮ ಚಲನಚಿತ್ರಗಳನ್ನು ಮಾತ್ರ ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿತ್ತು. . ಚಲನಚಿತ್ರಗಳಲ್ಲಿ ಕೆಲಸ ಮಾಡುವ ನಟರು ಮತ್ತು ತಂತ್ರಜ್ಞರಿಗೆ ಪ್ರಶಸ್ತಿಗಳನ್ನು ಮೊದಲ ಬಾರಿಗೆ 1967 ರಲ್ಲಿ ನೀಡಲು ಆರಂಭಿಸಲಾಯಿತು. ‘ರಾತ್ ಔರ್ ದಿನ್’ ಚಿತ್ರದಲ್ಲಿನ ಅಭಿನಯಕ್ಕಾಗಿ ನರ್ಗಿಸ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದ ಮೊದಲ ನಟಿಯಾಗಿದ್ದಾರೆ. ಅದೇ ವರ್ಷ ‘ಆಂಟನಿ ಫೈರಿಂಗ್’ ಮತ್ತು ‘ಚಿರಿಯಾಖಾನಾ’ ಚಿತ್ರಗಳಿಗಾಗಿ ಉತ್ತಮ್ ಕುಮಾರ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡಿದ್ದರು.
ಕಳೆದ ವರ್ಷ ಪುಷ್ಪಾ: ದಿ ರೈಸ್ ಚಿತ್ರಕ್ಕಾಗಿ ಅಲ್ಲು ಅರ್ಜುನ್ ಅತ್ಯುತ್ತಮ ನಟ ಪ್ರಶಸ್ತಿ ಗೆದ್ದರೆ, ‘ಗಂಗೂಬಾಯಿ ಕಾಥಿಯಾವಾಡಿ’ ಮತ್ತು ‘ಮಿಮಿ’ ಚಿತ್ರಕ್ಕಾಗಿ ಆಲಿಯಾ ಭಟ್ ಮತ್ತು ಕೃತಿ ಸನೋನ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದರು. ರಾಕೆಟ್ರಿ: ದಿ ನಂಬಿ ಎಫೆಕ್ಟ್ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.
2024 ರ ರಾಷ್ಟ್ರೀಯ ಪ್ರಶಸ್ತಿ ವಿಜೇತರು
• ಅತ್ಯುತ್ತಮ ಚಲನಚಿತ್ರ: ಆಟಂ (ಮಲಯಾಳಂ)
• ಅತ್ಯುತ್ತಮ ಜನಪ್ರಿಯ ಚಿತ್ರ: ಕಾಂತಾರ (ಕನ್ನಡ)
• ಅತ್ಯುತ್ತಮ ನಟ: ರಿಷಬ್ ಶೆಟ್ಟಿ (ಕಾಂತಾರಾ)
• ಅತ್ಯುತ್ತಮ ನಟಿ – ನಿತ್ಯಾ ಮೆನನ್ ಮತ್ತು ಮಾನಸಿ ಪರೇಖ್
• ಅತ್ಯುತ್ತಮ ನಿರ್ದೇಶಕ – ಸೂರಜ್ ಬರ್ಜಾತ್ಯ
• ಅತ್ಯುತ್ತಮ ಪೋಷಕ ನಟಿ – ನೀನಾ ಗುಪ್ತಾ
• ಅತ್ಯುತ್ತಮ ಪೋಷಕ ನಟ – ಪವನ್ ಮಲ್ಹೋತ್ರಾ
• ಅತ್ಯುತ್ತಮ ಚೊಚ್ಚಲ ಚಿತ್ರ- ಫೌಜಾ, ಪ್ರಮೋದ್ ಕುಮಾರ್
• ಅತ್ಯುತ್ತಮ ತೆಲುಗು ಚಿತ್ರ – ಕಾರ್ತಿಕೇಯ 2
• ಅತ್ಯುತ್ತಮ ತಮಿಳು ಚಿತ್ರ – ಪೊನ್ನಿಯಿನ್ ಸೆಲ್ವನ್ -ಭಾಗ 1
• ಅತ್ಯುತ್ತಮ ಪಂಜಾಬಿ ಚಿತ್ರ – ಬಾಘಿ ದಿ ಧೀ
• ಅತ್ಯುತ್ತಮ ಒಡಿಯಾ ಚಿತ್ರ – ದಮನ್
• ಅತ್ಯುತ್ತಮ ಮಲಯಾಳಂ ಚಿತ್ರ – ಸೌದಿ ವೇಲಕ್ಕ ಸಿಸಿ.225/2009
• ಅತ್ಯುತ್ತಮ ಮರಾಠಿ ಚಿತ್ರ – ವಾಲ್ವಿ
• ಅತ್ಯುತ್ತಮ ಕನ್ನಡ ಚಿತ್ರ – ಕೆಜಿಎಫ್: ಚಾಪ್ಟರ್ 2
• ಅತ್ಯುತ್ತಮ ಹಿಂದಿ ಚಿತ್ರ – ಗುಲ್ಮೊಹರ್
• ವಿಶೇಷ ಪ್ರಶಸ್ತಿ ಗುಲ್ಮೋಹರ್ ನಲ್ಲಿ ಮನೋಜ್ ಬಾಜಪೇಯಿ ಮತ್ತು ಕಾಲಿಖಾನ್ನಲ್ಲಿ ಸಂಜೋಯ್ ಸಲಿಲ್ ಚೌಧರಿ
• ಅತ್ಯುತ್ತಮ ಆಕ್ಷನ್ ನಿರ್ದೇಶನ – ಕೆಜಿಎಫ್: ಚಾಪ್ಟರ್ 2
• ಅತ್ಯುತ್ತಮ ನೃತ್ಯ ಸಂಯೋಜನೆ – ತಿರುಚಿತ್ರಾಂಬಲಂ
• ಅತ್ಯುತ್ತಮ ಸಾಹಿತ್ಯ – ಫೌಜಾ
• ಅತ್ಯುತ್ತಮ ಸಂಗೀತ ನಿರ್ದೇಶಕ – ಪ್ರೀತಮ್ (ಹಾಡುಗಳು), ಎ.ಆರ್.ರೆಹಮಾನ್ (ಹಿನ್ನೆಲೆ ಸಂಗೀತ)
• ಅತ್ಯುತ್ತಮ ಮೇಕಪ್ – ಅಪರಾಜಿತೋ
• ಅತ್ಯುತ್ತಮ ಕಾಸ್ಟ್ಯೂಮ್ – ಕಛ್ ಎಕ್ಸ್ ಪ್ರೆಸ್
• ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್ – ಅಪರಾಜಿತೋ
• ಅತ್ಯುತ್ತಮ ಸಂಕಲನ – ಆಟಂ
• ಅತ್ಯುತ್ತಮ ಸೌಂಡ್ ಡಿಸೈನ್ – ಪೊನ್ನಿಯಿನ್ ಸೆಲ್ವನ್ -ಪಾರ್ಟ್ 1
• ಅತ್ಯುತ್ತಮ ಚಿತ್ರಕಥೆ – ಆಟಂ
• ಅತ್ಯುತ್ತಮ ಸಂಭಾಷಣೆ – ಗುಲ್ಮೊಹರ್
• ಅತ್ಯುತ್ತಮ ಛಾಯಾಗ್ರಹಣ – ಪೊನ್ನಿಯಿನ್ ಸೆಲ್ವನ್ -ಭಾಗ 1
• ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ – ಸೌದಿ ವೇಲಕ್ಕ ಸಿಸಿ.225/2009
• ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ – ಬ್ರಹ್ಮಾಸ್ತ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ.