ಬೆಂಗಳೂರು: ಕನ್ನಡ ಭಾಷೆ, ಕಲೆ ಮತ್ತು ಸಂಸ್ಕೃತಿಯ ಸಂರಕ್ಷಣೆಗೆಂದೇ ಸ್ಥಾಪಿತವಾದ “ಕನ್ನಡ ಮತ್ತು ಸಂಸ್ಕೃತಿ ಇಲಾಖೆ” ಇದೀಗ ಮಹಾ ಎಡವಟ್ಟೊಂದನ್ನು ಮಾಡಿದೆ.
ಹೌದು..ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬಿಲ್‌ಯೊಂದರಲ್ಲಿ ಕನ್ನಡ ಪದಗಳನ್ನು ತಪ್ಪಾಗಿ ಬರೆದಿರುವ ಪ್ರತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು,ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಪುಸ್ತಕಗಳ ನಗದು ರಸೀದಿಯಲ್ಲಿ ‘ಒಂಬತ್ತು ನೂರ ಹದಿನೈದು ರೂಪಾಯಿ ಮಾತ್ರ’ ಎಂದು ಬರೆಯುವ ಬದಲು “ರೂಪಾಯಿ ನೂರು ನೈನ್ ಮತ್ತು ಹದಿನೈದು ಮಾತ್ರ” ಎಂದು ತಪ್ಪಾಗಿ ಬರೆಯಲಾಗಿದೆ. ಈ ಘಟನೆಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿಯೇ ಇಂತಹ ಎಡವಟ್ಟುಗಳಾದರೆ ಮುಂದೆ ನಮ್ಮ ಕನ್ನಡದ ಗತಿ ಏನು ಎಂಬುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.
ಕನ್ನಡ–ಸಂಸ್ಕೃತಿ ಇಲಾಖೆ ಸಚಿವರಿಂದಲೇ ಎಡವಟ್ಟು!
ಇತ್ತೀಚೆಗಷ್ಟೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಕೂಡ ಮಹಾ ಎಡವಟ್ಟು ಮಾಡಿದ್ದರು. ಬಾಗಲಕೋಟೆ ಚಾಲುಕ್ಯ ಉತ್ಸವದ ಉದ್ಘಾಟನೆ ಕಾರ್ಯಕ್ರಮದಲ್ಲಿ ಇತಿಹಾಸ ಹೇಳುವ ಭರದಲ್ಲಿ ತಮ್ಮ ಭಾಷಣದ ಆರಂಭದಲ್ಲೇ ಇಮ್ಮಡಿ ಪುಲಿಕೇಶಿ ವೇದಿಕೆ ಎನ್ನುವ ಬದಲು ಇಮ್ಮಡಿ ಚಾಲುಕ್ಯರ ವೇದಿಕೆ ಎಂದು ಮಾತನ್ನು ಆರಂಭಿಸಿದ್ದರು. ಬಳಿಕ ಉತ್ತರದ ಹರ್ಷವರ್ಧನನ್ನ ಗೆಲ್ಲಿಸಿದ್ದ ಕೀರ್ತಿ ಪುಲಿಕೇಶಿಗೆ ಸಲ್ಲುತ್ತದೆ ಎಂದು ಹೇಳಿದ್ದರು.
ಇದಾದ ನಂತರ ಉತ್ತರ ಪಥೇಶ್ವರ ಹರ್ಷವರ್ಧನನ್ನ ಸೋಲಿಸಿ ದಕ್ಷಿಣಾಪಥೇಶ್ವರ ಎಂಬ ಬಿರುದು ಪಡೆದಿರುವ ಇಮ್ಮಡಿ ಪುಲಿಕೇಶಿ ಎನ್ನುವ ಬದಲು, ಹರ್ಷವರ್ಧನನ್ನ ಗೆಲ್ಲಿಸಿದ್ದ ಕೀರ್ತಿ ಪುಲಿಕೇಶಿಗೆ ಸಲ್ಲುತ್ತದೆ ಎಂದು ಸಚಿವ ಶಿವರಾಜ್ ತಂಗಡಗಿ ತಪ್ಪು ಮಾಹಿತಿಯ ಭಾಷಣ ಮಾಡಿರುವ ಬಗ್ಗೆ ಟೀಕೆಗಳು ವ್ಯಕ್ತವಾಗಿತ್ತು. ಈ ಬೆನ್ನಲ್ಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದಲೇ ಇಂತಹ ಎಡವಟ್ಟಾಗಿರುವುದು ನಾನಾ ಚರ್ಚೆಗೆ ಕಾರಣವಾಗಿದೆ,
ಇದನ್ನೂ ಓದಿ: ಮನ್ರೇಗಾ ಉಳಿಸಿ ಆಂದೋಲನ | ಧಾರವಾಡದ ಡಿಸಿ ಕಚೇರಿ ಎದುರು ಕಾಂಗ್ರೆಸ್ ಪ್ರತಿಭಟನೆ


















