ಬೊಮ್ಮನಹಳ್ಳಿ : ಕನ್ನಡಿಗರ ಬಗ್ಗೆ ಅವೇಳನಕಾರಿ ಹೇಳಿಕೆಯನ್ನು ನೀಡಿರುವ ಹಿಂದಿ ಮೂಲದ ವ್ಯಕ್ತಿಯನ್ನು ಪೊಲೀಸರು ಬಂಧಿಸುವ ಮೂಲಕ ಸೊಕ್ಕಿಳಿಸಿದ್ದಾರೆ.
ಕನ್ನಡಿಗ ಕೋರಿಯರ್ ಬಾಯ್ ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಬೆಂಗಾಲಿ ಮೂಲದ ವ್ಯಕ್ತಿಯ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡು ಬೊಮ್ಮನಹಲ್ಳಿ ಠಾಣೆಯಲ್ಲಿ ದೂರು ದಾಖಲಿಸಿ, ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.
ರಾಜಧಾನಿ ಬೆಂಗಳೂರು ಅನೇಕ ಭಾಗಗಳಿಂದ ಬಂದವರಿಗೆ ಆಶ್ರಯವನ್ನು ನೀಡಿದೆ. ಕನ್ನಡ ಮಾತನಾಡುವವರೊಂದಿಗೆ ಹಿಂದಿ, ತಮಿಳು, ತೆಲುಗು ಸೇರಿ ಇನ್ನಿತರೆ ಭಾಷೆಗಳನ್ನು ಮಾತನಾಡುವವರೂ ಇಲ್ಲಿ ನೆಲೆನಿಂತಿದ್ದಾರೆ. ಇಲ್ಲಿ ದುಡಿಯುತ್ತಿದ್ದು, ಇಲ್ಲಿನ ಭಾಷೆಯಲ್ಲೇ ಹೆಚ್ಚಾಗಿ ವ್ಯವಹರಿಸಬೇಕಾದವರು ಕನ್ನಡವನ್ನು ವಿರೋಧಿಸಿಕೊಂಡು ದರ್ಪ ಮೆರೆಯುತ್ತಿರುವುದು ನಿರಂತರವಾಗಿ ನಡೆಯುತ್ತಲೇ ಇದೆ. ಈಗ ಸಾಲಿಗೆ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಹಿಂದಿವಾಲನ ಈ ದರ್ಪಕ್ಕೆ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣ ಈಗ ಬುದ್ದಿ ಕಲಿಸಿದೆ.
ಕನ್ನಡ, ಕರ್ನಾಟಕದ ಬಗ್ಗೆ ನಾಲಿಗೆ ಹರಿಬಿಟ್ಟ ಹಿಂದಿವಾಲ ಮಿಥುನ್ ಸರ್ಕಾರ್ ವ್ಯಕ್ತಿ ಅವಾಚ್ಯವಾಗಿ ನಿಂದಿಸಿದ್ದಾನೆ. ಡೆಲಿವರಿ ಬಾಯ್ ನೀಡಿದ ದೂರಿನ ಅನ್ವಯ ಆತನಿಗಾಗಿ ಬಲೆ ಬೀಸಿದ ಪೊಲೀಸರು ಸದ್ಯಕ್ಕೆ ಆತನನ್ನು ಬಂಧನಕ್ಕೊಳಪಡಿಸಿ ವಿಚಾರಣೆ ಮಾಡುತ್ತಿದ್ದಾರೆಂದು ತಿಳಿದು ಬಂದಿದೆ.
ಆತ ಕನ್ನಡಿಗರು ಹಾಗೂ ಕರ್ನಾಟಕದ ಬಗ್ಗೆ ಅವಾಚ್ಯವಾಗಿ ಮಾತನಾಡಿರುವ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕನ್ನಡಿಗರಿಂದ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣ ಕನ್ನಡದ ವಿರುದ್ಧವಾಗಿ ಹೀಗೆ ಅವಾಚ್ಯವಾಗಿ ಮಾತನಾಡುವವರ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದೆ.



















