ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೌಕರರ ಕನ್ನಡ ಸಂಘದ ವತಿಯಿಂದ 69ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕ, ಸಾಧಕಿಯರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಡಾ. ಪುನೀತ್ ರಾಜ್ ಕುಮಾರ್ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಈ ಕಾರ್ಯಕ್ರಮವು ಅ. 22ರಂದು ಮಂಗಳವಾರ ಸಂಜೆ 4ಕ್ಕೆ ಬೆಂಗಳೂರಿನ ಬಿಬಿಎಂಪಿ ಕೇಂದ್ರ ಕಚೇರಿ ಎದುರಿಗಿರುವ ಯೂನೈಟೆಡ್ ಪ್ರೌಢಶಾಲೆ ಮೈದಾನದಲ್ಲಿ ನಡೆಯಲಿದೆ.

ಅಲ್ಲದೇ, ಈ ಸಂದರ್ಭದಲ್ಲಿ ಬಿಬಿಎಂಪಿ ಅಧಿಕಾರಿಗಳು ಮತ್ತು ನೌಕರರಿಗಾಗಿ ಓಟದ ಸ್ಪರ್ಧೆಯನ್ನು ಕೂಡ ಆಯೋಜಿಸಲಾಗಿದೆ. ಮಹಿಳೆಯರಿಗಾಗಿ 1500 ಮೀಟರ್ ಓಟದ ಸ್ಪರ್ಧೆ ನಡೆಯಲಿದೆ. ಪುರುಷರಿಗಾಗಿ 3000 ಸಾವಿರ ಮೀಟರ್ ಓಟದ ಸ್ಪರ್ಧೆ ನಡೆಯಲಿದೆ.
ಸ್ಪರ್ದೆಯಲ್ಲಿ ಪ್ರಥಮ ಸ್ಥಾನ ಗಳಿಸಿದವರಿಗೆ 10 ಸಾವಿರ ರೂ., ದ್ವಿತೀಯ ಸ್ಥಾನ ಗಳಿಸಿದವರಿಗೆ 5 ಸಾವಿರ ರೂ. ಹಾಗೂ ತೃತೀಯ ಸ್ಥಾನ ಗಳಿಸಿದವರಿಗೆ 3 ಸಾವಿರ ಬಹುಮಾನ ನೀಡಲಾಗುವುದು. ಅಲ್ಲದೇ, ಸಮಾಧಾನಕರ ಬಹುಮಾನಗಳನ್ನು ಕೂಡ ನೀಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ಸಂಘದ ಅಧ್ಯಕ್ಷ ಎಸ್. ಸಾಯಿಶಂಕರ್, ಪ್ರಧಾನ ಕಾರ್ಯದರ್ಶಿ ಎ.ಅಮೃತ್ ರಾಜ್ ಹಾಗೂ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.