ಹಾವೇರಿ: ಇಂದು ಕನಕದಾಸರ 537ನೇ ಜಯಂತಿ. ದಾಸ ಸಾಹಿತ್ಯಕ್ಕೆ ಕೊಡುಗೆ ನೀಡಿದ ದಾಸರ ಜಯಂತಿಯನ್ನು ಇಂದು ರಾಜ್ಯಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ.
ದಾಸಶ್ರೇಷ್ಠರಲ್ಲಿ ಒಬ್ಬರಾಗಿರುವ ಕನಕದಾಸರು 1509 ರಂದು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮದಲ್ಲಿ ಬಚ್ಚಮ್ಮ ಮತ್ತು ಬೀರಪ್ಪ ಎಂಬ ದಂಪತಿಯ ಮಗನಾಗಿ ಜನಿಸಿದರು. ಅವರ ಮೂಲ ಹೆಸರು ತಿಮ್ಮಪ್ಪ ನಾಯಕ. ಬಾಡ ಅವರ ಜನ್ಮ ಭೂಮಿ. ಬ್ಯಾಡಗಿ ತಾಲೂಕಿನ ಕಾಗಿನೆಲೆ ಕನಕದಾಸರ ಕರ್ಮಭೂಮಿ. ವಿಜಯನಗರ ಅರಸರ ಆಡಳಿತದಲ್ಲಿ ದಂಡನಾಯಕನಾಗಿದ್ದ ತಿಮ್ಮಪ್ಪ ನಾಯಕನಿಗೆ ಚಿನ್ನ ಸಿಕ್ಕಿದ್ದರಿಂದ ಕನಕನಾಗುತ್ತಾನೆ. ಆನಂತರ ಯುದ್ಧದಲ್ಲಿ ಭಾಗವಹಿಸಿ ಅಲ್ಲಿನ ಹಿಂಸೆ ಕಂಡು ದಾಸರಾಗಿ ಸಮಾಜದ ಅಂಕು ಡೊಂಕು ತಿದ್ದುವ ಕಾಯಕ ಮಾಡುತ್ತಾರೆ.
ಅವರು ರಚಿಸಿದ ಕೃತಿಗಳು ಸಮಾಜದ ಅಂಕುಡೊಂಕುಗಳನ್ನು ತಿದ್ದಿದ್ದಲ್ಲದೆ ಈಗಲೂ ಅವು ಸಮಾಜಕ್ಕೆ ಮಾದರಿಯಾಗಿವೆ. ಕನಕದಾಸರು 1609 ರಲ್ಲಿ ಕಾಗಿನೆಲೆಯಲ್ಲಿ ಇಹಲೋಕ ತ್ಯಜಿಸಿದರು. ಕನಕದಾಸರು ರಚಿಸಿದ ನಳಚರಿತ್ರೆ, ಮೋಹನತರಂಗಿಣಿ, ರಾಮಧಾನ್ಯ ಚರಿತ ಮತ್ತು ಹರಿಭಕ್ತಿಸಾರ ಕೃತಿಗಳು ಕನ್ನಡ ಸಾಹಿತ್ಯದ ಶ್ರೇಷ್ಠ ಕೃತಿಗಳಾಗಿವೆ. ಕಾಗಿನೆಲೆ ಆದಿಕೇಶವನ ಅಂಕಿತನಾಮದಲ್ಲಿ ರಚಿಸಿದ ಕೀರ್ತನೆಗಳು ಇಂದಿಗೂ ಜನರ ಬದುಕಿಗೆ ದಾರಿ ದೀಪವಾಗಿವೆ.
ಸರ್ಕಾರ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ರಚಿಸಿದ್ದು, ಪ್ರಾಧಿಕಾರ ಕನಕದಾಸರ ಜೀವನಗಾಥೆ ಸಾರುವ ಸ್ಮಾರಕಗಳನ್ನ ರಕ್ಷಿಸುತ್ತಿದೆ. ಬಾಡದಲ್ಲಿ ಕನಕದಾಸರ ಅರಮನೆ ನಿರ್ಮಾಣವಾಗಿದ್ದರೆ, ಕಾಗಿನೆಲೆಯಲ್ಲಿ ಪರಿಸರ ಉದ್ಯಾನವನ, ಕಾಗಿನೆಲೆ ದ್ವಾರಗೋಪುರ, ಕನಕದಾಸರ ಗದ್ದುಗೆ ಕನಕ ಚೆನ್ನಕೇಶವ ದೇವಸ್ಥಾನ ಸ್ಥಾಪನೆಯಾಗಿವೆ.