ಅಮೆರಿಕಾ : ಅಮೆರಿಕದಲ್ಲಿ ಚುನಾವಣಾ ಕಾವು ಜೋರಾಗಿದೆ. ಡೊನಾಲ್ಡ್ ಟ್ರಂಪ್ ಹಾಗೂ ಕಮಲಾ ಹ್ಯಾರಿಸ್ ಮಧ್ಯೆ ಫೈಟ್ ಶುರುವಾಗಿದೆ. ಈ ಮಧ್ಯೆ ಟ್ರಂಪ್ ಮೇಲೆ ಗುಂಡಿನ ದಾಳಿ ನಡೆದ ಪ್ರಕರಣಗಳು ವರದಿಯಾಗಿದ್ದವು. ಈ ಘಟನೆಗಳು ಮಾಸುವ ಮುನ್ನವೇ ಈಗ ಉಪಾಧ್ಯಕ್ಷೆ ಹಾಗೂ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರ ಚುನಾವಣಾ ಪ್ರಚಾರ ಕಚೇರಿಯ ಮೇಲೆ ಗುಂಡಿನ (Gunshots Fired )ದಾಳಿ ನಡೆದಿದೆ ಎಂದು ವರದಿಯಾಗಿದೆ.
ಅಮೆರಿಕದ ಮಾಜಿ ಅಧ್ಯಕ್ಷ ಹಾಗೂ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮೇಲೆ ಇತ್ತೀಚೆಗೆ ಎರಡು ಬಾರಿ ಗುಂಡಿನ ದಾಳಿಗಳು ನಡೆದಿದ್ದವು. ಆ ಘಟನೆಗಳು ಮಾಸುವ ಮುನ್ನವೇ ಕಮಲಾ ಹ್ಯಾರಿಸ್ ಕಚೇರಿ ಮೇಲೆ ಗುಂಡಿನ ದಾಳಿ ನಡೆದಿರುವುದು ಅಮೆರಿಕದ ಜನರಲ್ಲಿ ಆತಂಕ ಮೂಡಿಸಿದೆ.
ಮಂಗಳವಾರ ಮಧ್ಯರಾತ್ರಿ ನಂತರ ಅರಿಜೋನಾ ರಾಜ್ಯದಲ್ಲಿ ಕಮಲಾ ಹ್ಯಾರಿಸ್ ಅವರ ಚುನಾವಣಾ ಪ್ರಚಾರ ಸಮನ್ವಯ ಕಚೇರಿಯ ಮೇಲೆ ಅಪರಿಚಿತ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಕಚೇರಿಯ ಕಿಟಕಿ ಗಾಜುಗಳು ಒಡೆದಿವೆ. ಈ ವೇಳೆ ಕಚೇರಿಯಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಡೆಮಾಕ್ರಟಿಕ್ ಪಕ್ಷದ ಕಾರ್ಯಕರ್ತರನ್ನು ಭಯಭೀತಗೊಳಿಸುವ ಉದ್ದೇಶದಿಂದ ಈ ದಾಳಿ ನಡೆಸಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಡೆಮಾಕ್ರಟಿಕ್ ಪಕ್ಷದ ಮುಖಂಡರು ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ.