ಮುಂಬಯಿ: ಇಡೀ ದೇಶದ ಚಿತ್ತ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಫಲಿತಾಂಶದ ಮೇಲಿದೆ. ದಕ್ಷಿಣ ಭಾರತದ ದೊಡ್ಡ ರಾಜ್ಯಗಳಲ್ಲಿ ಒಂದಾಗಿರುವ ಮಹಾರಾಷ್ಟ್ರದಲ್ಲಿ ಚುನಾವಣಾ ಫಲಿತಾಂಶ ಹೊರ ಬೀಳುತ್ತಿದೆ. ಆರಂಭಿಕ ಟ್ರೆಂಡ್ ನಲ್ಲಿ ಕಮಲದ ಮೈತ್ರಿಗೆ ಮತದಾರ ಜೈ ಎಂದಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
ಬಿಜೆಪಿ – ಶಿವಸೇನೆ ಶಿಂಧೆ ಬಣ – ಎನ್‌ಸಿಪಿ ಅಜಿತ್ ಬಣದ ಆಡಳಿತಾರೂಢ ಮೈತ್ರಿಕೂಟ ‘ಮಹಾಯುತಿ’ ಭಾರಿ ಮುನ್ನಡೆ ಕಾಯ್ದುಕೊಂಡು ಸಾಗುತ್ತಿದೆ. ಸದ್ಯದ ಟ್ರೆಂಡ್ ನಂತೆ ಮಹಾಯುತಿ 200 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಅಗಾಡಿಯು 74 ಸ್ಥಾನ ಹಾಗೂ ಇತರೆ 14 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
288 ಸದಸ್ಯ ಬಲದ ವಿಧಾನಸಭೆಯಲ್ಲಿ 145 ಮ್ಯಾಜಿಕ್ ನಂಬರ್ ಆಗಿದೆ. ಸಮೀಕ್ಷೆಗಳ ಅಭಿಪ್ರಾಯದಂತೆ ಈಗ ಮಹಾಯುತಿ ಮಹಾರಾಷ್ಟ್ರದಲ್ಲಿ ಮುನ್ನಡೆ ಕಾಯ್ದುಕೊಳ್ಳುತ್ತಿದೆ. ಮಹಾರಾಷ್ಟ್ರದಲ್ಲಿ ಶೇ. 66.05ರಷ್ಟು ಅತ್ಯಧಿಕ ಮತದಾನವಾಗಿತ್ತು.
ಮಹಾರಾಷ್ಟ್ರದಲ್ಲಿ‘ಮಹಾಯುತಿ’ ಅಥವಾ ‘ಮಹಾ ವಿಕಾಸ್ ಆಘಾಡಿ’ ಪೈಕಿ ಯಾವ ಮೈತ್ರಿಕೂಟ ಬಹುಮತ ಸಾಧಿಸಿದರೂ ಸರಕಾರ ರಚನೆ ಕಷ್ಟ ಸಾಧ್ಯ ಎನ್ನಲಾಗುತ್ತಿದೆ. ಉಭಯ ಪಾಳಯಗಳಲ್ಲಿ ಮುಖ್ಯಮಂತ್ರಿ ಆಕಾಂಕ್ಷಿಗಳ ದೊಡ್ಡ ಪಟ್ಟಿ ಇರುವುದೇ ಕಾರಣ. ಮಹಾಯುತಿಯಲ್ಲಿ ಹಾಲಿ ಸಿಎಂ ಶಿಂಧೆ, ಡಿಸಿಎಂಗಳಾದ ದೇವೇಂದ್ರ ಫಡ್ನವಿಸ್, ಎನ್‌ಸಿಪಿಯ ಅಜಿತ ಪವಾರ್ ಆಕಾಂಕ್ಷಿಗಳಿದ್ದಾರೆ. ಹೀಗಾಗಿ ಮಹಾಯುತಿ ಗೆದ್ದರೂ ಸಿಎಂ ಸ್ಥಾನಕ್ಕಾಗಿ ಸಂಕಷ್ಟ ಕಟ್ಟಿಟ್ಟ ಬುತ್ತಿ ಎನ್ನಲಾಗುತ್ತಿದೆ.