ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಕ್ರ್ಯೂ9 ಡ್ರ್ಯಾಗನ್ ಕ್ಯಾಪ್ಸೂಲ್‌ನಲ್ಲಿ ಕೊನೆಗೂ ಭೂಮಿಗೆ ಮರಳಿದ್ದಾರೆ. ಅವರು ಸುರಕ್ಷಿತವಾಗಿ ಭೂಮಿಯನ್ನು ಸ್ಪರ್ಶಿಸಲಿ ಎಂದು ಕೋಟ್ಯಂತರ ಮನಸ್ಸುಗಳು ಅದರಲ್ಲೂ ವಿಶೇಷವಾಗಿ ಭಾರತೀಯರು ಪ್ರಾರ್ಥಿಸುತ್ತಲೇ ಇದ್ದರು. ಇದಕ್ಕೆ ಕಾರಣ 2003ರಲ್ಲಿ ಭಾರತಕ್ಕೆ ಮತ್ತು ಬಾಹ್ಯಾಕಾಶ ವಿಜ್ಞಾನ ಜಗತ್ತಿಗೆ ಆಗಿದ್ದ ಆಘಾತ!
ಫೆಬ್ರವರಿ 1, 2003ರಂದು ನಿಗದಿತ ಲ್ಯಾಂಡಿಂಗ್‌ಗೆ ಕೇವಲ 16 ನಿಮಿಷಗಳು ಬಾಕಿಯಿರುವಂತೆಯೇ ಬಾಹ್ಯಾಕಾಶ ನೌಕೆ ಕೊಲಂಬಿಯಾ ಗಗನದಲ್ಲೇ ಸ್ಫೋಟಗೊಂಡು, ಛಿದ್ರವಾಗಿತ್ತು. ಆ ದುರಂತದಲ್ಲಿ ಬಲಿಯಾದ ಗಗನಯಾನಿಗಳ ಪೈಕಿ ಭಾರತದ ಹೆಮ್ಮೆಯ ಪುತ್ರಿ, ಗಗನಯಾನಿ ಕಲ್ಪನಾ ಚಾವ್ಲಾ ಕೂಡ ಒಬ್ಬರು. ಅವರನ್ನು ಕಳೆದುಕೊಂಡಿದ್ದು ಇಡೀ ಬಾಹ್ಯಾಕಾಶ ವಿಜ್ಞಾನ ಲೋಕಕ್ಕೆ ಮತ್ತು ಭಾರತಕ್ಕೆ ಆದ ದೊಡ್ಡ ನಷ್ಟ.
ಕಲ್ಪನಾ ಚಾವ್ಲಾ ಬಳಿಕ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ ಮತ್ತೊಬ್ಬ ಗಗನಯಾನಿಯೆಂದರೆ ಸುನೀತಾ ವಿಲಿಯಮ್ಸ್. ಅಮೆರಿಕದಲ್ಲೇ ಹುಟ್ಟಿ ಬೆಳೆದಿದ್ದರೂ, ಭಾರತೀಯರಿಗೆ ಈಗಲೂ ಸುನೀತಾ “ನಮ್ಮವಳು”. ಸುನೀತಾ ಕೂಡ ಭಾರತದ ನಂಟನ್ನು ಗಟ್ಟಿಯಾಗಿಯೇ ಉಳಿಸಿಕೊಂಡು ಬಂದಿದ್ದಾರೆ. ಬಾಹ್ಯಾಕಾಶ ಸಂಶೋಧನೆ ಕ್ಷೇತ್ರದಲ್ಲಿ ಭಾರತೀಯ ಮೂಲದ ಈ ಇಬ್ಬರು ಮಹಿಳೆಯರು ತಮ್ಮ ಅಮೋಘ ಸಾಧನೆಗಳಿಂದ ಪ್ರಪಂಚವನ್ನೇ ಅಚ್ಚರಿಗೊಳಿಸಿದ್ದಾರೆ. ಜೊತೆಗೆ ಜಗತ್ತಿನ ಮಹಿಳೆಯರಿಗೆ ಈ ಕ್ಷೇತ್ರದಲ್ಲಿ ಸಾಧನೆಗೈಯ್ಯಲು ಸ್ಫೂರ್ತಿಯನ್ನೂ ನೀಡಿದ್ದಾರೆ. ಬಾಹ್ಯಾಕಾಶ ಲೋಕದ ಈ ಇಬ್ಬರು ಧ್ರುವತಾರೆಯರ ಬಗ್ಗೆ ಒಂದಿಷ್ಟು ತಿಳಿದುಕೊಳ್ಳೋಣ.
ಕಲ್ಪನಾ ಚಾವ್ಲಾ
ಮಾರ್ಚ್ 17, 1962 ರಂದು ಹರಿಯಾಣದ ಕರ್ನಾಲ್ ಜಿಲ್ಲೆಯಲ್ಲಿ ಜನಿಸಿದ ಕಲ್ಪನಾ ಅವರು, ಪಂಜಾಬ್ ಎಂಜಿನಿಯರಿಂಗ್ ಕಾಲೇಜಿನಿಂದ ಏರೋಸ್ಪೇಸ್ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದವರು. ನಂತರ ಅಮೆರಿಕದ ಕೊಲೊರಾಡೊ ವಿಶ್ವವಿದ್ಯಾಲಯದಿಂದ ಮಾಸ್ಟರ್ಸ್ ಮತ್ತು ಪಿಎಚ್ಡಿ ಪದವಿಗಳನ್ನು ಗಳಿಸಿದರು. ಅವರನ್ನು ಎಲ್ಲರೂ ಪ್ರೀತಿಯಿಂದ ‘ಮೊಂಟೊ’ ಎಂದು ಕರೆಯುತ್ತಿದ್ದರು. ಅವರ ತಂದೆ ಬನಾರಸಿ ಲಾಲ್ ಚಾವ್ಲಾ ಅವರು ಭಾರತ ವಿಭಜನೆಯ ಭೀಕರತೆಯನ್ನು ಕಣ್ಣಾರೆ ಕಂಡವರು. ಕಲ್ಪನಾಗೆ ಬಾಲ್ಯದಿಂದಲೇ ಬಾಹ್ಯಾಕಾಶದ ಬಗ್ಗೆ ವಿಶೇಷ ಆಸಕ್ತಿಯಿತ್ತು. ಶಾಲೆಯಲ್ಲಿನ ಭೌಗೋಳಿಕ ಯೋಜನೆಗಾಗಿ, ಕಲ್ಪನಾ ಒಂದು ಬಾರಿ ಹಳೆಯ ಪತ್ರಿಕೆಗಳ ತುಣುಕುಗಳನ್ನು ಬಳಸಿಕೊಂಡು ಚಂದ್ರ, ನಕ್ಷತ್ರಗಳು ತುಂಬಿದ ಬ್ರಹ್ಮಾಂಡದ ಮಾದರಿಯನ್ನು ನಿರ್ಮಿಸಿದ್ದಳು ಎಂದು ಅವರ ಶಿಕ್ಷಕಿ ಈಗಲೂ ನೆನಪಿಸಿಕೊಳ್ಳುತ್ತಾರೆ.
ಎಂಜಿನಿಯರಿಂಗ್ ಪದವಿ ಪಡೆದ ನಂತರ, ಕಲ್ಪನಾ ಅಮೆರಿಕಕ್ಕೆ ತೆರಳಿದರು, ಅಲ್ಲಿ ಅವರು ಏರೋಸ್ಪೇಸ್ ಎಂಜಿನಿಯರಿಂಗ್ ನಲ್ಲಿ ಸ್ನಾತಕೋತ್ತರ ಮತ್ತು ಪಿಎಚ್ಡಿ ಪೂರ್ಣಗೊಳಿಸಿದರು. ಅವರ ಸಂಶೋಧನೆಯು ಅವರನ್ನು 1988ರಲ್ಲಿ ನಾಸಾದ ಏಮ್ಸ್ ಸಂಶೋಧನಾ ಕೇಂದ್ರಕ್ಕೆ ಕರೆದೊಯ್ಯಿತು. ಅಲ್ಲಿ ಅವರು ಪವರ್-ಲಿಫ್ಟ್ ಕಂಪ್ಯೂಟೇಶನಲ್ ಫ್ಲೂಯಿಡ್ ಡೈನಾಮಿಕ್ಸ್‌ನಲ್ಲಿ ಕೆಲಸ ಮಾಡಿದರು.
1997ರಲ್ಲಿ, ಕಲ್ಪನಾ ನಾಸಾದ STS-87 ಮಿಷನ್‌ನಲ್ಲಿ ಬಾಹ್ಯಾಕಾಶಕ್ಕೆ ತೆರಳಿದ್ದರು. ಆ ಮೂಲಕ ಬಾಹ್ಯಾಕಾಶಕ್ಕೆ ಹಾರಿದ ಮೊದಲ ಭಾರತೀಯ ಮೂಲದ ಮಹಿಳೆ ಎನಿಸಿಕೊಂಡರು. ಅಲ್ಲಿ 372 ಗಂಟೆಗಳನ್ನು ಕಳೆದು ಮತ್ತು 10.4 ದಶಲಕ್ಷ ಮೈಲುಗಳನ್ನು ಪ್ರಯಾಣಿಸಿ ಭೂಮಿಗೆ ಮರಳಿದ್ದರು. ಅವರ 2ನೇ ಬಾಹ್ಯಾಕಾಶ ಯಾನವು 2003ರಲ್ಲಿ ನಡೆದಿತ್ತು. ದುರದೃಷ್ಟವಶಾತ್, ಅವರು ಬರುತ್ತಿದ್ದ ಕೊಲಂಬಿಯಾ ಬಾಹ್ಯಾಕಾಶ ನೌಕೆಯು ಭೂಮಿಯ ವಾತಾವರಣಕ್ಕೆ ಪ್ರವೇಶಿಸುವ ವೇಳೆ ಪತನಗೊಂಡಿತು. ಕಲ್ಪನಾ ಸೇರಿದಂತೆ ಏಳು ಖಗೋಳವಿಜ್ಞಾನಿಗಳು ಆಗಸದಲ್ಲೇ ಸುಟ್ಟು ಕರಕಲಾದರು.
ಸುನೀತಾ ವಿಲಿಯಮ್ಸ್
ಇನ್ನು, ಸುನೀತಾ ವಿಲಿಯಮ್ಸ್ ಅವರು ಗುಜರಾತ್ ಮೂಲದ ಭಾರತೀಯ ಅಮೆರಿಕನ್ ಗಗನಯಾನಿ. 1965ರಲ್ಲಿ ಅಮೆರಿಕದ ಓಹಿಯೋದಲ್ಲಿ ಜನಿಸಿದವರು. ಅವರ ತಂದೆ ಡಾ. ದೀಪಕ್ ಪಾಂಡ್ಯಾ ಗುಜರಾತ್‌ನಿಂದ ಅಮೆರಿಕಕ್ಕೆ ವಲಸೆ ಹೋಗಿದ್ದರು.
ಸುನೀತಾ ಯುನೈಟೆಡ್ ಸ್ಟೇಟ್ಸ್ ನೇವಲ್ ಅಕಾಡೆಮಿಯಿಂದ ಪದವಿ ಪಡೆದು ನಾಸಾ ಸೇರಿದ್ದರು. 2006ರಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹಾರಿದ್ದರು. 195 ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆದ ಅವರು ಅಲ್ಲಿ ದೀರ್ಘಕಾಲ ಕಳೆದ ಮಹಿಳೆಯೆಂಬ ದಾಖಲೆ ಸೃಷ್ಟಿಸಿದ್ದರು. 2012ರಲ್ಲಿ ಎರಡನೇ ಬಾಹ್ಯಾಕಾಶ ಯಾನ. ಈ ವೇಳೆ ಬಾಹ್ಯಾಕಾಶದಲ್ಲಿ 50 ಗಂಟೆಗಳಿಗೂ ಹೆಚ್ಚು ಸಮಯವನ್ನು ನಡಿಗೆಯಲ್ಲೇ ಕಳೆದಿದ್ದರು. ನಂತರ 2024ರಲ್ಲಿ ಐಎಸ್ಎಸ್ ತಲುಪಿದ ಅವರು 9 ತಿಂಗಳ ಕಾಲ ಸಂಶೋಧನೆ ನಡೆಸಿ ಇದೀಗ ವಾಪಸಾಗಿದ್ದಾರೆ.
ಕಲ್ಪನಾ-ಸುನೀತಾ ಸಾಧನೆ
ಕಲ್ಪನಾ ಚಾವ್ಲಾ ಮೈಕ್ರೋಗ್ರಾವಿಟಿ ಮತ್ತು ರೋಬೋಟಿಕ್ಸ್ ಕುರಿತು ಸಂಶೋಧನೆ ನಡೆಸಿ, ನಾಸಾದ ವೈಜ್ಞಾನಿಕ ಉನ್ನತಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅವರು ಹುಟ್ಟುಹಾಕಿದ ಪರಂಪರೆಯು ಭಾರತದಲ್ಲಿ ಎಂಜಿನಿಯರುಗಳು ಮತ್ತು ಖಗೋಳಯಾತ್ರಿಗಳ ಸೃಷ್ಟಿಗೆ ಪ್ರೇರಣೆಯಾಗಿದೆ. ಸುನಿತಾ ವಿಲಿಯಮ್ಸ್ ನಾಸಾದ ಹೊಸ ಬಾಹ್ಯಾಕಾಶ ತಂತ್ರಜ್ಞಾನಗಳನ್ನು ಪರೀಕ್ಷಿಸುವ, ಜೀವಶಾಸ್ತ್ರ ಸಂಬಂಧಿತ ಪ್ರಯೋಗಗಳನ್ನು ನಡೆಸುವ ಕಾರ್ಯಗಳಲ್ಲಿ ಎತ್ತಿದ ಕೈ. ಬಾಹ್ಯಾಕಾಶ ನಡಿಗೆಯಲ್ಲೂ ಅವರು ಎಲ್ಲರನ್ನೂ ಮೀರಿಸಿದ್ದಾರೆ. ಭವಿಷ್ಯದ ಪೀಳಿಗೆಯವರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.
ಇಬ್ಬರಿಗೂ ಸಮೋಸಾ ಎಂದರೆ ಇಷ್ಟ
ಕಲ್ಪನಾ ಚಾವ್ಲಾ ಮತ್ತು ಸುನೀತಾ ವಿಲಿಯಮ್ಸ್ ಇಬ್ಬರೂ ತಮ್ಮ ಭಾರತದ ನಂಟನ್ನು ಗಟ್ಟಿಯಾಗಿ ಅಪ್ಪಿಕೊಂಡವರು. ಇಬ್ಬರಿಗೂ ಸಮೋಸಾ ಎಂದರೆ ಪಂಚಪ್ರಾಣ. ಕಲ್ಪನಾ ಅವರೂ ತಮ್ಮ ಬಾಹ್ಯಾಕಾಶ ಯಾನದ ವೇಳೆ ಭಾರತೀಯ ಆಹಾರವನ್ನೇ ಹೆಚ್ಚು ಇಷ್ಟಪಡುತ್ತಿದ್ದರು. ಸುನೀತಾ ಕೂಡ ತಮ್ಮ ಪ್ರತಿ ಪಯಣದ ಸಮಯದಲ್ಲೂ ತಮ್ಮೊಂದಿಗೆ ಸಮೋಸಾವನ್ನು ಒಯ್ಯುತ್ತಾರೆ. 2024ರಲ್ಲಿ ಬೋಯಿಂಗ್ ಸ್ಟಾರ್ ಲೈನರ್ ನಲ್ಲಿ ತೆರಳಿದ್ದಾಗಲೂ ಅವರು ಸಮೋಸಾ, ಜೊತೆಗೆ, ಭಗವದ್ಗೀತೆ, ಉಪನಿಷತ್‌ನ ಪ್ರತಿಗಳನ್ನೂ ಕೊಂಡೊಯ್ದಿದ್ದರು.