ನವದೆಹಲಿ: ಖ್ಯಾತ ನಟಿ ಕಾಜಲ್ ಅಗರ್ವಾಲ್ ಅವರು ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ ಎಂಬ ಸುದ್ದಿ ನಿಜವೇ?
ಅಪಘಾತಕ್ಕೆ ನಟಿ ಕಾಜಲ್ ಅಗರ್ವಾಲ್ ಬಲಿ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಅವರ ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಸಿದೆ. ಈ ಆಧಾರರಹಿತ ವದಂತಿಗಳಿಗೆ ಸ್ವತಃ ನಟಿ ಕಾಜಲ್ ಅವರೇ ತೆರೆ ಎಳೆದಿದ್ದು, ನಾನು ಆರೋಗ್ಯವಾಗಿದ್ದೇನೆ ಮತ್ತು ಸುರಕ್ಷಿತವಾಗಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಹಲವು ಅವೈಜ್ಞಾನಿಕ ವರದಿಗಳು, ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಕಾಜಲ್ ನಿಧನರಾಗಿದ್ದಾರೆ ಎಂದು ಹೇಳಿದ್ದವು. ಇದು ಅವರ ಅಭಿಮಾನಿಗಳಲ್ಲಿ ಗೊಂದಲಕ್ಕೆ ಕಾರಣವಾಗಿತ್ತು.
ಈ ಸುಳ್ಳು ಸುದ್ದಿಗಳಿಗೆ ಪ್ರತಿಕ್ರಿಯಿಸಿದ ಕಾಜಲ್, ತಮ್ಮ ಇನ್‌ಸ್ಟಾಗ್ರಾಮ್ ಮತ್ತು ಎಕ್ಸ್ (ಟ್ವಿಟರ್) ಖಾತೆಗಳಲ್ಲಿ, “ನಾನು ಅಪಘಾತಕ್ಕೀಡಾಗಿದ್ದೇನೆ. ಈಗ ಬದುಕಿಲ್ಲ ಎಂಬಂತಹ ಕೆಲವು ಆಧಾರರಹಿತ ಸುದ್ದಿಗಳನ್ನು ನೋಡಿದೆ. ಇದು ತಮಾಷೆಯಾಗಿದೆ, ಏಕೆಂದರೆ ಇದು ಸಂಪೂರ್ಣವಾಗಿ ಸುಳ್ಳು,” ಎಂದು ಬರೆದುಕೊಂಡಿದ್ದಾರೆ.
“ದೇವರ ದಯೆಯಿಂದ, ನಾನು ಸಂಪೂರ್ಣವಾಗಿ ಆರೋಗ್ಯವಾಗಿದ್ದೇನೆ, ಸುರಕ್ಷಿತವಾಗಿದ್ದೇನೆ ಮತ್ತು ಚೆನ್ನಾಗಿದ್ದೇನೆ ಎಂದು ಎಲ್ಲರಿಗೂ ಭರವಸೆ ನೀಡಲು ಬಯಸುತ್ತೇನೆ. ದಯವಿಟ್ಟು ಇಂತಹ ಸುಳ್ಳು ಸುದ್ದಿಗಳನ್ನು ನಂಬಬೇಡಿ ಅಥವಾ ಹರಡಬೇಡಿ. ಬನ್ನಿ, ನಮ್ಮ ಶಕ್ತಿಯನ್ನು ಸಕಾರಾತ್ಮಕತೆ ಮತ್ತು ಸತ್ಯದ ಕಡೆಗೆ ಕೇಂದ್ರೀಕರಿಸೋಣ,” ಎಂದು ಅವರು ಮನವಿ ಮಾಡಿದ್ದಾರೆ.
ಕಾಜಲ್ ಅಗರ್ವಾಲ್ ಇತ್ತೀಚೆಗೆ ಸಲ್ಮಾನ್ ಖಾನ್ ಅವರ ‘ಸಿಕಂದರ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ವರದಿಗಳ ಪ್ರಕಾರ, ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಚಿತ್ರದಲ್ಲಿ ಮಂಡೋದರಿ ಪಾತ್ರದಲ್ಲಿ ನಟಿಸಲಿದ್ದಾರೆ. ಇದರಲ್ಲಿ ರಣಬೀರ್ ಕಪೂರ್, ಯಶ್, ಸಾಯಿ ಪಲ್ಲವಿ ಮತ್ತು ಸನ್ನಿ ಡಿಯೋಲ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಇದರೊಂದಿಗೆ ಕಮಲ್ ಹಾಸನ್ ಅವರ ‘ಇಂಡಿಯನ್ 3’ ಚಿತ್ರದಲ್ಲೂ ಕಾಜಲ್ ನಟಿಸುತ್ತಿದ್ದಾರೆ.