ವಿಧಾನಸಭೆಯಲ್ಲಿ 18 ಬಿಜೆಪಿಯ ಶಾಸಕರನ್ನು ಅಮಾನತು ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಬೇಸರ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿದ ಕಾಗೇರಿ, ಬಿಜೆಪಿಯ 18 ಶಾಸಕರನ್ನು ಸದನದಿಂದ ಅಮಾನತು ಮಾಡಿರುವ ಸಭಾಧ್ಯಕ್ಷರ ನಿರ್ಧಾರ ಆಘಾತಕಾರಿಯು ಮತ್ತು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ.
ಸದನದೊಳಗೆ ಸಚಿವರೊಬ್ಬರು ತಮ್ಮ ಮೇಲೆ ಹನಿಟ್ರ್ಯಾಪ್ ಮಾಡಲಾಗಿದೆ ಮತ್ತು ಇನ್ನೊಬ್ಬ ಸಚಿವರು 48 ಕ್ಕೂ ಹೆಚ್ಚು ಜನರನ್ನು ಹನಿಟ್ರ್ಯಾಪ್ ಮಾಡಲಾಗಿದೆ ಎಂದು ಹೇಳಿರುವ ಬಗ್ಗೆ ತನಿಖೆಗೆ ಆಗ್ರಹಿಸಿ ನಡೆದ ಧರಣಿಯು ನ್ಯಾಯಸಮ್ಮತ ಮತ್ತು ವಿರೋಧ ಪಕ್ಷದ ಹಕ್ಕು ಸಹಾ ಆಗಿತ್ತು.
ದುರ್ದೈವ, ಸಭಾಧ್ಯಕ್ಷರು ಮುಖ್ಯಮಂತ್ರಿಯವರ ಅಣತಿಯಂತೆ ಸದಸ್ಯರನ್ನು ಸದನದಿಂದ ಆರು ತಿಂಗಳು ಅಮಾನತು ಮಾಡಿದ್ದು ದುರಾದೃಷ್ಟಕರವಾಗಿದೆ ಎಂದು ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ತರುವಾಯ ವಿರೋಧ ಪಕ್ಷದ ಶಾಸಕರ ಮೇಲೆ ದಮನಕಾರಿ ನೀತಿಯನ್ನು ಅನುಸರಿಸುತ್ತಿದೆ. ಸದಸ್ಯರ ಹಕ್ಕು ಮತ್ತು ಅವರ ಹಿತವನ್ನು ಕಾಪಾಡಬೇಕಿದ್ದ ಸಭಾಧ್ಯಕ್ಷರಾದ ಯು.ಟಿ ಖಾದರ್ ರವರು ಮುಖ್ಯಮಂತ್ರಿಗಳ ಹಾಗೂ ಕಾನೂನು ಸಚಿವರ ಒತ್ತಡಕ್ಕೆ ಮಣಿದು ಈ ಅತಿರೇಕದ ನಿರ್ಣಯ ಕೈಗೊಂಡು ಪ್ರಜಾಪ್ರಭುತ್ವದ ಹತ್ಯೆ ಎಸಗಿದ್ದಾರೆ.
ಸಭಾಧ್ಯಕ್ಷರು ತಮ್ಮ ಅಮಾನತು ನಿರ್ಧಾರವನ್ನು ಪುನರ್ ಪರಿಶೀಲಿಸಿ ಶಾಸಕರ ಆರು ತಿಂಗಳ ಅಮಾನತು ನಿರ್ಧಾರವನ್ನು ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸುತ್ತೇನೆ ಎಂದು ಮನವಿ ಮಾಡಿದ್ದಾರೆ.