ತುಮಕೂರು: ಹೇಮಾವತಿ ಎಕ್ಸ್ ಪ್ರೆಸ್ ಲಿಂಕಿಂಗ್ ಕೆನಾಲ್ ವಿಚಾರವಾಗಿ ಸಚಿವ ಕೆ.ಎನ್. ರಾಜಣ್ಣ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಬೆಂಬಲಿಗರ ಮಧ್ಯೆ ವಾರ್ ಶುರುವಾಗಿದೆ.
ಸಚಿವ ಕೆ.ಎನ್. ರಾಜಣ್ಣ ಕುಟುಂಬ ಹಾಗೂ ಡಿ.ಕೆ. ಶಿವಕುಮಾರ್ ಬೆಂಬಲಿಗರ ಮಧ್ಯೆ ಶೀಥಲ ಸಮರ ಜೋರಾಗಿದೆ. ಕುಣಿಗಲ್ ಕಾಂಗ್ರೆಸ್ ಶಾಸಕ, ಡಿಕೆಶಿ ಸಂಬಂಧಿ ಡಾ. ರಂಗನಾಥ್ ನನಗೆ ಫೋನ್ ಮಾಡಿ ಧಮಕಿ ಹಾಕುತ್ತಿದ್ದಾರೆ ಎಂದು ಸಚಿವ ಕೆ.ಎನ್. ರಾಜಣ್ಣ ಅವರ ಪುತ್ರ ರಾಜೇಂದ್ರ ರಾಜಣ್ಣ ಆರೋಪಿಸಿದ್ದಾರೆ.
ಎರಡು ತಿಂಗಳುಗಳಿಂದ ಕುಣಿಗಲ್ ಕ್ಷೇತ್ರದವರು ಲಿಂಕ್ ಕೆನಾಲ್ ವಿಚಾರವಾಗಿ ಫೋನ್ ಮಾಡುತ್ತಿದ್ದಾರೆ. ಲಿಂಕ್ ಕೆನಾಲ್ ಕಾಮಗಾರಿ ನಾನು ಹಾಗೂ ಸಚಿವರು ನಿಲ್ಲಿಸುತ್ತಿದ್ದೇವೆ ಎಂದು ಧಮ್ಕಿ ಹಾಕುತ್ತಿದ್ದಾರೆ. ತಾಲೂಕಿಗೆ ನೀರು ಬರುವುದನ್ನು ತಂದೆ-ಮಗ ಸೇರಿ ನಿಲ್ಲಿಸುತ್ತಿದ್ದೀರಿ ಎಂದು ಆರೋಪಿಸಿ, ಧಮ್ಕಿ ಹಾಕುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಲಿಂಕ್ ಕೆನಾಲ್ ನಾವೇನು ತಡೆದಿದ್ದೇವಾ? ಟೆಂಡರ್ ಆಗಿದೆ. ಕಾಮಗಾರಿ ನಡೆಯುತ್ತಿದೆ. ಹೇಮಾವತಿ ಎಕ್ಸ್ ಪ್ರೆಸ್ ಕೆನಾಲ್ ನಿಂದ ತೊಂದರೆ ಆಗುವುದು ಮಧುಗಿರಿ ಹಾಗೂ ಕೊರಟಗೆರೆ ತಾಲೂಕಿಗೆ. ನಮ್ಮ ಕುಡಿಯುವ ನೀರನ್ನು ನೀವು ದಾರಿ ಮಧ್ಯದಲ್ಲೇ ತೆಗೆದುಕೊಂಡರೆ ನಮ್ಮ ಪರಿಸ್ಥಿತಿ ಏನಾಗಬೇಕು? ಎಂದು ಡಿಕೆಶಿ ಕನಸಿನ ಕೂಸು ಹೇಮಾವತಿ ಎಕ್ಸ್ ಪ್ರೆಸ್ ಕೆನಾಲ್ ವಿರುದ್ಧ ಪರೋಕ್ಷವಾಗಿ ಮಾತನಾಡಿದ್ದಾರೆ.
ನಿಮ್ಮ ಸಂಬಂಧಿ ಪ್ರಭಾವಿ ಸಚಿವರಾಗಿದ್ದಾರೆಂದು ನೀವು ನೀರು ತಗೊಂಡು ಹೋಗಬಹುದಾ? ಎಕ್ಸ್‌ಪ್ರೆಸ್ ಕೆನಾಲ್ ನಿಂದಾಗಿ ಜಿಲ್ಲೆಗೆ ಆಗುವ ಅನ್ಯಾಯದ ಕುರಿತು ರಾಜಣ್ಣ ಅವರು ಕ್ಯಾಬಿನೆಟ್ ನಲ್ಲಿ ಹೇಳಿದ್ದಾರೆ. ಅದನ್ನೇ ನೆಪ ಇಟ್ಟುಕೊಂಡು ಇವರು ಮಾತನಾಡುವುದು ಸರಿಯಲ್ಲ ಎಂದಿದ್ದಾರೆ.
ಸಹಕಾರಿ ಸಚಿವರಿಂದ ಸಹಕಾರ ಸಿಗುತ್ತಿಲ್ಲ ಎಂದು ಸದನದಲ್ಲಿ ಆರೋಪ ಮಾಡಿದ್ದ ಕುಣಿಗಲ್ ಶಾಸಕ ರಂಗನಾಥ್ ಅವರಿಗೆ ಮಗ ರಾಜೇಂದ್ರ ರಾಜಣ್ಣ ಮಧುಗಿರಿಯಲ್ಲಿ ಈಗ ಟಾಂಗ್ ಕೊಟ್ಟಿದ್ದಾರೆ.