ನವದೆಹಲಿ: ಭಾರತದ 53ನೇ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ. ಸೂರ್ಯಕಾಂತ್ ಅವರು ಸೋಮವಾರ ಪದಗ್ರಹಣ ಮಾಡಿದ್ದಾರೆ. ನವೆಂಬರ್ 23 ರಂದು ನಿವೃತ್ತರಾದ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಉತ್ತರಾಧಿಕಾರಿಯಾಗಿ ಸುಪ್ರೀಂ ಕೋರ್ಟ್‌ನ ಚುಕ್ಕಾಣಿ ಹಿಡಿದಿರುವ ಇವರು, 2027ರ ಫೆಬ್ರವರಿ 9ರವರೆಗೆ ಅಂದರೆ ಸುಮಾರು 15 ತಿಂಗಳುಗಳ ಕಾಲ ಈ ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ.
ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನ್ಯಾಯಮೂರ್ತಿ ಸುರ್ಯಕಾಂತ್ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಈ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ನೂತನ ಸಿಜೆಐ ಸ್ಫೂರ್ತಿದಾಯಕ ಪಯಣ:
ನ್ಯಾಯಮೂರ್ತಿ ಸೂರ್ಯಕಾಂತ್ ಅವರು 1962ರ ಫೆಬ್ರವರಿ 10ರಂದು ಹರ್ಯಾಣದ ಹಿಸಾರ್ ಜಿಲ್ಲೆಯ ಪೇಟ್ವಾರ್ ಎಂಬ ಸಣ್ಣ ಹಳ್ಳಿಯ ಮಧ್ಯಮ ವರ್ಗದ ರೈತ ಕುಟುಂಬದಲ್ಲಿ ಜನಿಸಿದರು. 1981ರಲ್ಲಿ ಹಿಸಾರ್ ಸರ್ಕಾರಿ ಸ್ನಾತಕೋತ್ತರ ಕಾಲೇಜಿನಿಂದ ಪದವಿ ಪಡೆದ ನಂತರ, 1984ರಲ್ಲಿ ರೋಹ್ತಕ್‌ನ ಮಹರ್ಷಿ ದಯಾನಂದ ವಿಶ್ವವಿದ್ಯಾಲಯದಿಂದ ಕಾನೂನು ಪದವಿ (ಎಲ್‌ಎಲ್‌ಬಿ) ಪಡೆದರು. ತಮ್ಮ ವೃತ್ತಿ ಜೀವನವನ್ನು 1984ರಲ್ಲಿ ಹಿಸಾರ್ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಾರಂಭಿಸಿದ ಅವರು, 1985ರಲ್ಲಿ ಚಂಡೀಗಢಕ್ಕೆ ತೆರಳಿ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ನಲ್ಲಿ ವಕಾಲತ್ತು ಮುಂದುವರಿಸಿದರು. ಅವರ ಕಾನೂನು ಪಾಂಡಿತ್ಯ ಮತ್ತು ಕಠಿಣ ಪರಿಶ್ರಮದಿಂದಾಗಿ 2000ನೇ ಇಸವಿಯಲ್ಲಿ ಹರ್ಯಾಣದ ಅಡ್ವೊಕೇಟ್ ಜನರಲ್ ಆಗಿ ನೇಮಕಗೊಂಡರು. ಈ ಹುದ್ದೆಗೇರಿದ ಅತ್ಯಂತ ಕಿರಿಯ ವ್ಯಕ್ತಿಗಳಲ್ಲಿ ಇವರೂ ಒಬ್ಬರು ಎಂಬ ಹೆಗ್ಗಳಿಕೆ ಇವರಿಗಿದೆ.
2004ರಲ್ಲಿ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದ ಇವರು, 2018ರಲ್ಲಿ ಹಿಮಾಚಲ ಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾದರು. ನ್ಯಾಯಾಲಯದ ಆಡಳಿತ ಸುಧಾರಣೆ ಮತ್ತು ಜನಸಾಮಾನ್ಯರಿಗೆ ತ್ವರಿತ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಇವರು ಕೈಗೊಂಡ ಕ್ರಮಗಳು ವ್ಯಾಪಕ ಮೆಚ್ಚುಗೆ ಗಳಿಸಿದವು. ನಂತರ 2019ರ ಮೇ ತಿಂಗಳಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆದರು.
ಐತಿಹಾಸಿಕ ತೀರ್ಪುಗಳ ರೂವಾರಿ
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಸೂರ್ಯಕಾಂತ್ ಅವರು ಹಲವು ಮಹತ್ವದ ಸಾಂವಿಧಾನಿಕ ಪೀಠಗಳ ಭಾಗವಾಗಿದ್ದಾರೆ:
ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು (ಆರ್ಟಿಕಲ್ 370): ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ಕೇಂದ್ರದ ನಿರ್ಧಾರವನ್ನು ಎತ್ತಿ ಹಿಡಿದ ಪೀಠದಲ್ಲಿ ಇವರೂ ಒಬ್ಬರಾಗಿದ್ದರು.
ಒಂದು ಹುದ್ದೆ ಒಂದು ಪಿಂಚಣಿ: ರಕ್ಷಣಾ ಪಡೆಗಳ ನಿವೃತ್ತ ಯೋಧರಿಗೆ ನೀಡಲಾಗುವ ‘ಒಂದು ಹುದ್ದೆ, ಒಂದು ಪಿಂಚಣಿ’ (OROP) ಯೋಜನೆಯನ್ನು ಸಂವಿಧಾನಬದ್ಧ ಎಂದು ಇವರು ಎತ್ತಿ ಹಿಡಿದಿದ್ದರು.
ಮಹಿಳಾ ಹಕ್ಕುಗಳು: ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಸೇರಿದಂತೆ ವಕೀಲರ ಸಂಘಗಳಲ್ಲಿ ಮೂರನೇ ಒಂದು ಭಾಗದಷ್ಟು ಹುದ್ದೆಗಳನ್ನು ಮಹಿಳೆಯರಿಗೆ ಮೀಸಲಿಡಬೇಕೆಂದು ಆದೇಶಿಸಿದ್ದರು. ಅಲ್ಲದೆ, ಗ್ರಾಮ ಪಂಚಾಯತ್‌ನ ಮಹಿಳಾ ಸರಪಂಚ್‌ರನ್ನು ಅಕ್ರಮವಾಗಿ ಹುದ್ದೆಯಿಂದ ಕಿತ್ತು ಹಾಕಿದ್ದನ್ನು ರದ್ದುಗೊಳಿಸಿ ಲಿಂಗ ತಾರತಮ್ಯದ ವಿರುದ್ಧ ದನಿ ಎತ್ತಿದ್ದರು.
ಪೆಗಾಸಸ್ ಪ್ರಕರಣ: ರಾಷ್ಟ್ರದ ಭದ್ರತೆಯ ಹೆಸರಿನಲ್ಲಿ ಸರ್ಕಾರಕ್ಕೆ ಯಾವುದೇ ನಿರ್ಬಂಧವಿಲ್ಲದೆ ಕಣ್ಗಾವಲು ಇರಿಸಲು ಅವಕಾಶ ನೀಡಲಾಗದು ಎಂದು ಹೇಳಿ, ಪೆಗಾಸಸ್ ಸ್ಪೈವೇರ್ ಪ್ರಕರಣದ ತನಿಖೆಗೆ ತಜ್ಞರ ಸಮಿತಿ ರಚಿಸಿದ ಪೀಠದಲ್ಲೂ ಇವರ ಪಾತ್ರವಿತ್ತು.
ಚುನಾವಣಾ ಸುಧಾರಣೆ: ಬಿಹಾರದಲ್ಲಿ ಮತದಾರರ ಪಟ್ಟಿಯಿಂದ ಕೈಬಿಡಲಾಗಿದ್ದ 65 ಲಕ್ಷ ಮತದಾರರ ವಿವರಗಳನ್ನು ನೀಡುವಂತೆ ಚುನಾವಣಾ ಆಯೋಗವನ್ನು ಪ್ರಶ್ನಿಸಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿದಿದ್ದರು.
ಮುಂದಿನ ಸವಾಲುಗಳು
ಸುಮಾರು 90,000ಕ್ಕೂ ಹೆಚ್ಚು ಪ್ರಕರಣಗಳು ಸುಪ್ರೀಂ ಕೋರ್ಟ್‌ನಲ್ಲಿ ಇತ್ಯರ್ಥಕ್ಕೆ ಬಾಕಿ ಇವೆ. ಬಾಕಿ ಇರುವ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವುದು ಮತ್ತು ಸಂವಿಧಾನ ಪೀಠದ ಪ್ರಕರಣಗಳಿಗೆ ಆದ್ಯತೆ ನೀಡುವುದು ತಮ್ಮ ಪ್ರಮುಖ ಗುರಿ ಎಂದು ನ್ಯಾ. ಸೂರ್ಯಕಾಂತ್ ಈಗಾಗಲೇ ಹೇಳಿದ್ದಾರೆ. ಜನಸಾಮಾನ್ಯರ ವಿಶ್ವಾಸವನ್ನು ನ್ಯಾಯಾಂಗದ ಮೇಲೆ ಮತ್ತಷ್ಟು ಹೆಚ್ಚಿಸುವುದು, ಕೆಳಹಂತದ ನ್ಯಾಯಾಲಯಗಳನ್ನು ಬಲಪಡಿಸುವುದು ಮತ್ತು ಮಧ್ಯಸ್ಥಿಕೆಯಂತಹ ಪರ್ಯಾಯ ವಿವಾದ ಪರಿಹಾರ ಮಾರ್ಗಗಳನ್ನು ಪ್ರೋತ್ಸಾಹಿಸುವುದು ಅವರ ಮುಂದಿನ ಆದ್ಯತೆಗಳಾಗಿವೆ.
ಇದನ್ನೂ ಓದಿ; ದುಬೈ ಏರ್ ಶೋ ಮುಂದುವರಿಕೆಗೆ ಆಕ್ರೋಶ : ತೇಜಸ್‌ನ ಮೃತ ಪೈಲಟ್ ಗೌರವಾರ್ಥ ಪ್ರದರ್ಶನ ರದ್ದುಗೊಳಿಸಿದ ಅಮೆರಿಕದ ಪೈಲಟ್


















