ಬೆಂಗಳೂರು: ಜೀವ ವಿಮೆ ಮಾಡಿಸಬೇಕು ಎಂದರೆ ತಿಂಗಳಿಗೆ ಸಾವಿರಾರು ರೂ. ಸಂಬಳ ಇರಬೇಕು, ವರ್ಷಕ್ಕೆ ಸಾವಿರಾರು ರೂ. ಪ್ರೀಮಿಯಂ ಕಟ್ಟಬೇಕು ಎಂಬ ತಪ್ಪು ಕಲ್ಪನೆ ಇದೆ. ಆದರೆ, ಕೇಂದ್ರ ಸರ್ಕಾರದ ಯೋಜನೆ ಅಡಿಯಲ್ಲಿ ವರ್ಷಕ್ಕೆ ಕೇವಲ 436 ರೂ. ಪ್ರೀಮಿಯಂ ಪಾವತಿ ಮಾಡಿದರೆ ಸಾಕು, 2 ಲಕ್ಷ ರೂ. ವಿಮೆ ಸುರಕ್ಷತೆ ಸಿಗುತ್ತದೆ.
ಹೌದು, ವರ್ಷಕ್ಕೆ ಕೇವಲ 436 ರೂಪಾಯಿ, ಅಂದರೆ ದಿನಕ್ಕೆ ಒಂದು ರೂಪಾಯಿ 20 ಪೈಸೆಯಷ್ಟು ಖರ್ಚಿನಲ್ಲಿ ನಿಮ್ಮ ಕುಟುಂಬಕ್ಕೆ ಬರೋಬ್ಬರಿ 2 ಲಕ್ಷ ರೂಪಾಯಿಗಳ ಸುರಕ್ಷೆಯನ್ನು ಒದಗಿಸಬಹುದು. ಕೇಂದ್ರ ಸರ್ಕಾರದ “ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (PMJJBY) ಅನ್ವಯ ಜನಸಾಮಾನ್ಯರಿಗೂ ಜೀವ ವಿಮೆಯ ಲಾಭ ಸಿಗಲಿದೆ.
18 ರಿಂದ 50 ವರ್ಷ ವಯಸ್ಸಿನ, ಯಾವುದೇ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಉಳಿತಾಯ ಖಾತೆ (ವಿಶೇಷವಾಗಿ ಜನ ಧನ್ ಖಾತೆ) ಹೊಂದಿರುವ ಪ್ರತಿಯೊಬ್ಬರೂ ಯೋಜನೆಗೆ ಅರ್ಹರು. ಹಣ ಪ್ರತಿ ವರ್ಷ ನಿಮ್ಮ ಖಾತೆಯಿಂದ ತಾನಾಗಿಯೇ 436 ರೂ. ಕಡಿತಗೊಳ್ಳುತ್ತದೆ. ಹೀಗಾಗಿ, ನೀವು ಪ್ರೀಮಿಯಂ ಕಟ್ಟುವುದನ್ನು ಮರೆತುಹೋಗುವ ಚಿಂತೆಯೇ ಇಲ್ಲ.
ವಿಮೆ ಮಾಡಿಸಿದ ವ್ಯಕ್ತಿ ಯಾವುದೇ ಕಾರಣದಿಂದ ಮರಣ ಹೊಂದಿದರೆ, ಅವರ ನಾಮಿನಿಗೆ (ನೋಂದಾಯಿತ ಸಂಬಂಧಿ) 2 ಲಕ್ಷ ರೂಪಾಯಿಗಳ ವಿಮಾ ಪರಿಹಾರ ಸಿಗುತ್ತದೆ. ಈ ಯೋಜನೆಯ ಅತ್ಯಂತ ದೊಡ್ಡ ಪ್ಲಸ್ ಪಾಯಿಂಟ್ ಎಂದರೆ, ಇದಕ್ಕೆ ಸೇರಲು ಯಾವುದೇ ವೈದ್ಯಕೀಯ ಪರೀಕ್ಷೆಯ ಅಗತ್ಯವಿಲ್ಲ. ನೀವು ಯಾವುದೇ ಡಾಕ್ಟರ್ ಸರ್ಟಿಫಿಕೇಟ್ ಅಥವಾ ವೈದ್ಯಕೀಯ ದಾಖಲೆಗಳನ್ನು ನೀಡಬೇಕಾಗಿಲ್ಲ.
ಯೋಜನೆ ಲಾಭ ಪಡೆಯೋದು ಹೇಗೆ?
ನೀವು ಮಾಡಬೇಕಾಗಿರುವುದು ಇಷ್ಟೇ. ನಿಮ್ಮ ಹತ್ತಿರದ ಅಥವಾ ಖಾತೆ ಹೊಂದಿರುವ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಅಥವಾ ನಿಮ್ಮ ಮೊಬೈಲ್ ಬ್ಯಾಂಕಿಂಗ್/ನೆಟ್ ಬ್ಯಾಂಕಿಂಗ್ ಮೂಲಕವೂ ಸುಲಭವಾಗಿ ನೋಂದಾಯಿಸಿಕೊಳ್ಳಬಹುದು. ಬ್ಯಾಂಕ್ ಆಫ್ ಮಹಾರಾಷ್ಟ್ರ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿ ಬಹುತೇಕ ಎಲ್ಲಾ ಬ್ಯಾಂಕುಗಳಲ್ಲಿ ಈ ಸೌಲಭ್ಯ ಲಭ್ಯವಿದೆ. ಸಾರ್ವಜನಿಕರು ಇದರ ಲಾಭ ಪಡೆಯಬಹುದು.