‘ ಜುಂಜಪ್ಪನ ಮಹಿಮೆ’ ಖ್ಯಾತ ಲೇಖಕ ಎನ್.ಟಿ.ಭಟ್ ಗದ್ಯರೂಪದಲ್ಲಿ ನಿರೂಪಿಸಿದ ಕಾಡುಗೊಲ್ಲರ ದೈವ ಜುಂಜಪ್ಪನ ಕುರಿತಾದ ಒಂದು ಜಾನಪದ ಮಹಾಕಾವ್ಯ. ಉದ್ದಕ್ಕೂ ಅತಿಮಾನುಷ. ಪಾತ್ರಗಳು, ವಿವರಗಳು ಮತ್ತು ಉತ್ಪ್ರೇಕ್ಷೆಗಳಿಂದ ತುಂಬಿದ ಈ ಕೃತಿಯ ಓದು ಒಂದು ವಿಶಿಷ್ಟ ಅನುಭವವನ್ನು ನೀಡುತ್ತದೆ. ಜುಂಜಪ್ಪನ ಹುಟ್ಟಿನ ಹಿನ್ನೆಲೆ, ಅವನು ಮತ್ತು ಅವನ ಸಹಚರರು ಮಾಡುವ ಸಾಹಸಗಳೇ ಇಲ್ಲಿ ಎದ್ದು ಕಾಣುವ ವಿಚಾರಗಳು.
ಜುಂಜಪ್ಪ ಅನ್ನುವ ಪಾತ್ರವು ಕಾಣಿಸಿಕೊಳ್ಳುವಾಗ ಪುಸ್ತಕದ ಸುಮಾರು ಅರ್ಧಕ್ಕೆ ನಾವು ತಲುಪಿರುತ್ತೇವೆ. ಕಾಡುಗೊಲ್ಲರ ಜನಾಂಗದ ಒಳರಾಜಕೀಯದ ದೃಶ್ಯಗಳೂ ಇಲ್ಲಿವೆ. ಜುಂಜಪ್ಪನ ಅಜ್ಜ ದೇವರ ದಯಮಾರ ತನ್ನ ಆರು ಮಂದಿ ಅಣ್ಣಂದಿರಿಂದ ವಂಚನೆಗೊಳಗಾಗಿ ಮನೆಬಿಟ್ಟು ಪ್ರತ್ಯೇಕವಾಗಿ ಹೋಗುವಲ್ಲಿಂದ ಈ ರಾಜಕೀಯ ತಂತ್ರಗಳು ಆರಂಭವಾಗುತ್ತವೆ. ಅವನು ನಂಬಿದ ದೈವಗಳ ಸಹಾಯದಿಂದ ಅವನಿಗೆ ಮದುವೆಯಾಗಿ ಕೆಂಗುರಿ ಮಲ್ಲೇ ಗೌಡ ಹುಟ್ಟುತ್ತಾನೆ. ಅಣ್ಣಂದಿರ ಕುಕೃತ್ಯಗಳು ಅವನ ದಾರಿ ಯಲ್ಲೂ ಅಡ್ಡಿಗಳನ್ನು ಒಡ್ಡುತ್ತಲೇ ಇರುತ್ತದೆ. ಮಲ್ಲೇಗೌಡ ಮದುವೆಯಾಗುವ ಹನ್ನೆರಡು ವರ್ಷದ ಎಳೆಯ ಹುಡುಗಿ ಚಿನ್ನಮ್ಮನ ಜತೆಗೆ ಒಂದಾಗಲು ಅವನಿಗೆ ಎದುರಾಗುವ ವಿಚಿತ್ರ ಸನ್ನಿವೇಶಗಳಿಂದಾಗಿ ಸಾಧ್ಯವಾಗುವುದೇ ಇಲ್ಲ. ಮತ್ತೆ ಹನ್ನೆರಡು ವರ್ಷಗಳ ಕಾಲ ಅವರು ದೂರದೂರವೇ ಇರಬೇಕಾಗುತ್ತದೆ. ಅಷ್ಟರಲ್ಲಿ ಚಿನ್ನಮ್ಮನನ್ನು ಬಂಜೆಯೆಂದು ಎಲ್ಲರೂ ದೂರಮಾಡಿರುತ್ತಾರೆ. ಅಲ್ಲಿಯೂ ದೇವರ ಕೃಪೆಯಿಂದಾಗಿ ಅವರಿಗೆ ಮೂರು ಗಂಡುಮಕ್ಕಳು ಮತ್ತು ಒಂದು ಹೆಣ್ಣುಮಗು ಹುಟ್ಟುತ್ತಾರೆ. ಅವರಲ್ಲಿ ಮೊದಲನೆಯವನೇ ಶಿವಭಕ್ತ ವೀರಭದ್ರನ ಅವತಾರವಾದ ಜುಂಜಪ್ಪ. ಆದರೆ ದೇವರು ಕೊಟ್ಟ ವರದ ಪ್ರಕಾರ ಜುಂಜಪ್ಪನಿಗೆ ಹದಿನಾರು ವರ್ಷವಷ್ಟೇ ಆಯುಸ್ಸು. ಜುಂಜಪ್ಪ ಹುಟ್ಟುತ್ತಲೇ ಅಪ್ಪ ಸಾಯುತ್ತಾನೆ.
ಹೋದೆಡೆಯಲ್ಲೆಲ್ಲಾ ತನ್ನ ಸಾಹಸಗಳಿಂದಾಗಿ ಜುಂಜಪ್ಪನ ಮಹಿಮೆಯ ಬಗ್ಗೆ ಎಲ್ಲರೂ ಭಯಭಕ್ತಿ ಹೊಂದಿದವರಾಗಿದ್ದಾರೆ. ಆದರೆ ಜುಂಜಪ್ಪನನ್ನೂ ಕೊಲ್ಲುವ ಪ್ರಯತ್ನಗಳು ಚಿನ್ನಮ್ಮನ ಅಣ್ಣಂದಿರಿಂದ ನಡೆಯುತ್ತಲೇ ಇರುತ್ತವೆ. ಜುಂಜಪ್ಪ ಸಾಗುವ ದಾರಿಯಲ್ಲಿ ಒಂದು ಗುಂಡಿ ತೋಡಿ ಒಂದು ಹೋರಿಕರುವನ್ಹುನು ಜೀವಂತ ಸಮಾಧಿ ಮಾಡಿ ಹುಗಿಯುವುದು ಅವರ ಪ್ರಯತ್ನಗಳಲ್ಲಿ ಒಂದು. ಆದರೆ ಜುಂಜಪ್ಪನ ದೈವೀಶಕ್ತಿ ಆ ಹೋರಿಕರುವಿಗೆ ಪುನರ್ಜನ್ಮ ನೀಡುವುದಲ್ಲದೆ ಅದರೊಳಗೂ ದೈವೀಶಕ್ತಿ ಸೇರಿಕೊಂಡು ಅದು ಜುಂಜಪ್ಪನ ಸಾಹಸಕೃತ್ಯಗಳಲ್ಲಿ ಭಾಗಿಯಾಗುತ್ತದೆ. ಅವನು ಕೈಗೆ ಸಿಗದಿದ್ದಾಗ ಚಿನ್ನಮ್ಮನ ಮೂಲಕ ಅವನನ್ನು ಮನೆಗೆ ಕರೆಸಿ ಊಟದಲ್ಲಿ ವಿಷ ಹಾಕಿ ಕೊಡುವ ಪ್ರಯತ್ನಗಳು ನಡೆಯುತ್ತವೆ. ತಾಯಿಯೇ ತನಗೆ ಮೋಸ ಮಾಡಿದಳೆಂದು ಜುಂಜಪ್ಪ ಅವಳ ಪ್ರಾಮಾಣಿಕತೆಯ ಪರಿಕ್ಷೆಯನ್ನು ಅವಳಿಗೆ ಏನೇನೋ ಕಷ್ಟದ ಕೆಲಸಗಳನ್ನು ಕೊಡುವುದರ ಮೂಲಕ ಮಾಡುತ್ತಾನೆ. ದೈವ ಸಹಾಯದಿಂದ ಚಿನ್ನಮ್ಮ ಎಲ್ಲಾ ಪರೀಕ್ಷೆಗಳಲ್ಲೂ ಗೆಲ್ಲುತ್ತಾಳೆ. ಕೊನೆಯದಾಗಿ ತನ್ನ ತಂದೆಯನ್ನು ತಂದು ಮುಂದೆ ನಿಲ್ಲಿಸಲು ಹೇಳುತ್ತಾನೆ. ಅದರಲ್ಲೂ ಅವಳು ಗೆಲ್ಲುತ್ತಾಳೆ. ತಂದೆ ಪ್ರತ್ಯಕ್ಷನಾಗಿ ತಾಯಿಯ ಪಾತಿವ್ರತ್ಯವನ್ನು ಪ್ರಮಾಣಿಕರಿಸುತ್ತಾನೆ. ಕೊನೆಗೆ ಚಿನ್ನಮ್ಮ ದೇಹಸಮೇತ ಸ್ವರ್ಗಲೋಕ ಸೇರುತ್ತಾೞೆ. ನಂತರ ಜುಂಜಪ್ಪ ಮತ್ತು ಅವನ ಇಬ್ಬರು ತಮ್ಮಂದಿರಾದ ಮಾಯಣ್ಣ ಮತ್ತು ಮಯಲಣ್ಣರೂ ಸ್ವರ್ಗ ಸೇರುತ್ತಾರೆ. ಜನರು ನಾಲ್ವರದ್ದೂ ಸ್ಮಾರಕ ಕಟ್ಟುತ್ತಾರೆ. ಕಥೆಯಲ್ಲಿ ಹೆಜ್ಜೆ ಹೆಜ್ಜೆಗೂ ಅತಿಮಾನುಷ. ಘಟನೆಗಳು ನಡೆಯುತ್ತಲ ಇರುವುದು ಈ ಮಹಾಕಾವ್ಯದ ಮುಖ್ಯ ಲಕ್ಷಣ. ಇದು ಕಾಡುಗೊಲ್ಲರ ಧಾರ್ಮಿಕ ಕಥನವೂ ಹೌದು.ಇದನ್ನು ವಿವಿಧ ಕಥನಕಾರರು ವಿವಿದ ರೂಪಗಳಲ್ಲಿ ಹೇಳುತ್ತಾರಾದ್ದರಿಂದ ಇದರ ಪಾಠಾಂತರಗಳೂ ಸಾಕಷ್ಡು ಇವೆ.ಇಲ್ಲಿರುವ ಕಥೆಯು ಶಿವಣ್ಣ ಎಂಬವರು ಹೇಳಿದ ಕಥೆಯ ಲಿಖಿತ ರೂಪ. ಈ ಪಾಠಾಂತರಗಳನ್ನು ಬಿ.ಎನ್.ಶಂಕರನಾರಾಯಣ ಮತ್ತು ಎಮ.ಎನ್.ವೆಂಕಟೇಶ್ ಎಂಬ ವಿದ್ವಾಂಸರುಗಳು ಸಂಪಾದಿಸಿದ್ದಾರೆ. ಅದನ್ನಾಧರಿಸಿ ಎನ್.ಟಿ.ಭಟ್ ಅವರು ಈ ಗದ್ಯ ಕಥಾನಕವನ್ನು ರಚಿಸಿದ್ದಾರೆ. ಒಂದು ಒಳ್ಳೆಯ ಜಾನಪದ ಕಥೆಯನ್ನು ಮಹಾಕಾವ್ಯದ ಶೈಲಿಯಲ್ಲಿ ನಿರೂಪಿಸಿರುವ ಈ ಕೃತಿ ಒಂದು ಒಳ್ಳೆಯ ಅನುಭವವನ್ನು ನೀಡುತ್ತದೆ.

-ಡಾ. ಪಾರ್ವಜಿ ಜಿ. ಐತಾಳ್
ಸಾಹಿತಿಗಳು, ಅನುವಾದಕರು
*****
ಕೃತಿಯ ಹೆಸರು : ಜುಂಜಪ್ಪನ ಮಹಿಮೆ(ಜಾನಪದ)
ನಿರೂಪಣೆ : ಡಾ.ಎನ್.ಟಿ.ಭಟ್



















