ಬೆಂಗಳೂರು, ಏಪ್ರಿಲ್ 17 ಇಂಟರ್ನ್ಯಾಷನಲ್ ಸ್ಟಾರ್ಟಪ್ ಫೌಂಡೇಶನ್ (ಐಎಸ್‌ಎಫ್) ಯಲಹಂಕದ ವಿಶ್ವ ವಿದ್ಯಾಪೀಠ ಶಾಲೆಯಲ್ಲಿ ತನ್ನ ಪ್ರಮುಖ ಕಾರ್ಯಕ್ರಮವಾಗಿರುವ ಜುನಿಕಾರ್ನಿವಲ್ ಬೆಂಗಳೂರು ಅನ್ನು ಗುರುವಾರ (ಏಪ್ರಿಲ್ 17ರಂದು) ಆಯೋಜಿಸಿತ್ತು. ಸಂಜೆ ನಡೆದ ಈ ಸ್ಫೂರ್ತಿದಾಯಕ ಕಾರ್ಯಕ್ರಮವು ಐಎಸ್‌ಎಫ್‌ನ ಜಾಗತಿಕ ವೇದಿಕೆಯಾಗಿರುವ ಐಎಸ್‌ಎಫ್ ಜುನಿಕಾರ್ನ್ ಮತ್ತು ಗ್ಲೋಬಲ್ ಎಐ ಸಮ್ಮಿಟ್ಗೆ ಭವ್ಯ ಆರಂಭವಾಗಿದೆ. ಆ ಕಾರ್ಯಕ್ರಮ ಮೇ 29 ಮತ್ತು 30ರಂದು ಅಮೆರಿಕದ ಟೆಕ್ಸಾಸ್ ಸ್ಟೇಟ್ ಯೂನಿವರ್ಸಿಟಿಯಲ್ಲಿ ನಡೆಯಲಿದೆ.
ಜುನಿಕಾರ್ನಿವಲ್ ಬೆಂಗಳೂರು, ಭಾರತದ ಕೆಲವು ಪ್ರತಿಷ್ಠಿತ ಸಂಶೋಧಕರು ಮತ್ತು ಸ್ಟಾರ್ಟಪ್ ಪರಿಸರ ವ್ಯವಸ್ಥೆಯ ಗಣ್ಯರು ಒಟ್ಟುಗೂಡುವಂತೆ ಮಾಡಿತು. ಇಸ್ರೋ ಮಾಜಿ ಅಧ್ಯಕ್ಷ ಶ್ರೀ ಎ.ಎಸ್. ಕಿರಣ್ ಕುಮಾರ್, ಭಾರತದ ಟೆಕ್ ಇಕೋಸಿಸ್ಟಮ್‌ನ ಮುಖ್ಯ ರೂವಾರಿ ಮತ್ತು ಐಎಸ್‌ಎಫ್ ಸಂಸ್ಥಾಪಕ ಡಾ. ಜೆ.ಎ. ಚೌಧರಿ, ಕಲಾರಿ ಕ್ಯಾಪಿಟಲ್ನ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ರಾಜು, ಹಿರಿಯ ಸಲಹೆಗಾರ, ಎಂಡೋಕ್ರಿನಾಲಜಿಸ್ಟ್ ಡಾ. ಸತೀಶ್ ಬಾಬು ಕೆ.ಎನ್, ಬೆಂಗಳೂರು ಏರ್‌ಪೋರ್ಟ್ ಸಿಟಿ ಲಿಮಿಟೆಡ್ನ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಸಿಇಒ ಮ ರಾವ್ ಮುನುಕುಟ್ಲ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಅವರೆಲ್ಲರೂ ಭಾರತದ ಆವಿಷ್ಕಾರ ಸಾಮರ್ಥ್ಯದ ಬಗ್ಗೆ, ವಿಶೇಷವಾಗಿ ಎರಡು ಮತ್ತು ಮೂರನೇ ಹಂತದ ನಗರಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಉದಯೋನ್ಮುಖ ಪ್ರತಿಭೆಗಳ ಸೃಷ್ಟಿ ಸಾಧ್ಯತೆಯ ಒಳನೋಟಗಳನ್ನು ಹಂಚಿಕೊಂಡರು.
ಈ ಕಾರ್ಯಕ್ರಮವು ಐಎಸ್‌ಎಫ್ ಜುನಿಕಾರ್ನ್100ಕೆಗೆ ಸೂಕ್ತ ವೇದಿಕೆ ಒದಗಿಸಿತು. ಈ ರಾಷ್ಟ್ರೀಯ ಅಭಿಯಾನವು 8ರಿಂದ 25 ವಯಸ್ಸಿನ 1,00,000 ಗ್ರಾಮೀಣ ಯುವಕರನ್ನು ಆವಿಷ್ಕಾರಕರಾಗಿ ಮತ್ತು ಬದಲಾವಣೆಯ ರೂವಾರಿಗಳಾಗಿ ಸಶಕ್ತಗೊಳಿಸುವ ಗುರಿ ಹೊಂದಿದೆ. ಕೃಷಿ, ಹವಾಮಾನ, ಆರೋಗ್ಯ, ಮತ್ತು ಡೀಪ್ ಟೆಕ್‌ನಂತಹ ರಾಷ್ಟ್ರೀಯ ಆದ್ಯತೆಯ ಕ್ಷೇತ್ರಗಳಿಗೆ ಸಂಬಂಧಿಸಿದ ಗ್ರಾಮೀಣ ಸವಾಲುಗಳನ್ನು ಪರಿಹರಿಸುವುದು ಇದರ ಪ್ರಮುಖ ಉದ್ದೇಶ.
ಐಎಸ್‌ಎಫ್ ಸಂಸ್ಥಾಪಕ ಡಾ. ಜೆ.ಎ. ಚೌಧರಿ ಮಾತನಾಡಿ,”ನಾವು ಕೇವಲ ಸ್ಟಾರ್ಟಪ್‌ಗಳನ್ನು ನಿರ್ಮಿಸುತ್ತಿಲ್ಲ; ಗ್ರಾಮೀಣ ಮೂಲದಿಂದ ಜಾಗತಿಕ ನಾಯಕರನ್ನು ಸೃಷ್ಟಿಸುತ್ತಿದ್ದೇವೆ. ಜುನಿಕಾರ್ನ್ ಎಂಬುದು ಗ್ರಾಮೀಣ ಕನಸುಗಳಿಂದ ಚಾಲಿತ ಅಭಿಯಾನ” ಎಂದು ಹೇಳಿದರು. .
ಐಎಸ್‌ಎಫ್ ಸಹ-ಸಂಸ್ಥಾಪಕ ಡಾ. ಶಿವ ಮಹೇಶ್ ತಂಗುಟೂರು ಮಾತನಾಡಿ,” ಭಾರತದಾದ್ಯಂತ ಆಯ್ಕೆಯಾದ 50 ಜುನಿಕಾರ್ನ್‌ಗಳಲ್ಲಿ ಕರ್ನಾಟಕದಿಂದ ಸುಮಾರು 8 ಯುವ ಉದ್ಯಮಿಗಳನ್ನು ಆಯ್ಕೆ ಮಾಡಲಾಗಿದೆ. ಈ ಉಪಕ್ರಮವು ಯುವ ಪೀಳಿಗೆಯನ್ನು ಉದ್ಯೋಗದಾತರಾಗಿ ಪರಿವರ್ತಿಸಲಿದೆ” ಎಂದು ವಿವರಿಸಿದರು.
ಜುನಿಕಾರ್ನ್100ಕೆ ಉಪಕ್ರಮವು ಭಾರತದ ಗ್ರಾಮೀಣ ಪ್ರದೇಶದಿಂದ ಸೃಷ್ಟಿಯಾದ ದಿಟ್ಟ ಆಲೋಚನೆಗಳನ್ನು ಸ್ಕೇಲೆಬಲ್ ಪ್ರೊಟೊಟೈಪ್‌ಗಳು ಮತ್ತು ಉದ್ಯಮಗಳಾಗಿ ಪರಿವರ್ತಿಸುವ ಮೂಲಕ ಪ್ರಾಯೋಗಿಕ ಆವಿಷ್ಕಾರದ ಸಂಸ್ಕೃತಿ ಹುಟ್ಟುಹಾಕುವ ಗುರಿಯನ್ನು ಹೊಂದಿದೆ.
ಐಎಸ್‌ಎಫ್ ಜುನಿಕಾರ್ನ್ ಮತ್ತು ಗ್ಲೋಬಲ್ ಎಐ ಸಮ್ಮಿಟ್, ಟೆಕ್ಸಾಸ್ ಸ್ಟೇಟ್ ಯೂನಿವರ್ಸಿಟಿ, ಯುಎಸ್-ಇಂಡಿಯಾ ಚೇಂಬರ್ ಆಫ್ ಕಾಮರ್ಸ್, ಟಿಐಇ ಆಸ್ಟಿನ್, ಕ್ವಾಲಿಟಿ ಇಂಜಿನಿಯರಿಂಗ್ ಫೌಂಡೇಶನ್, ಮತ್ತು ಮಾಂಡೀ ಸಹಯೋಗದೊಂದಿಗೆ ನಡೆಯಲಿದೆ. ಭಾರತದ 30 ಗ್ರಾಮೀಣ ಆವಿಷ್ಕಾರಕರು ಯುಎಸ್‌ಗೆ ಭೇಟಿ ನೀಡಿ ಈ ಸಮ್ಮಿಟ್ನಲ್ಲಿ ಪಾಲ್ಗೊಂಡು ತಮ್ಮ ಆಲೋಚನೆಗಳನ್ನು ಪ್ರಸ್ತುತಪಡಿಸಲು ಅವಕಾಶ ಪಡೆಯಲಿದ್ದಾರೆ.
ಸಮ್ಮಿಟ್‌ನ ಪ್ರಮುಖ ಆಕರ್ಷಣೆಯೆಂದರೆ ಎಕ್ಸ್‌ಕ್ಲೂಸಿವ್ ಸಿಇಒ ನೆಟ್‌ವರ್ಕಿಂಗ್ ಈವೆಂಟ್, ಇದರಲ್ಲಿ 200ಕ್ಕೂ ಹೆಚ್ಚು ಜಾಗತಿಕ ನಾಯಕರು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಐಎಸ್‌ಎಫ್ ಕ್ಯಾಪಿಟಲ್ ತನ್ನ ಫಂಡ್ ಆಫ್ ಫಂಡ್ಸ್ ಅನ್ನು ಅಧಿಕೃತವಾಗಿ ಪ್ರಾರಂಭಿಸಲಿದೆ. ಈ ಕಾರ್ಯತಂತ್ರದ ಹೂಡಿಕೆ ಉಪಕ್ರಮವು ಗ್ರಾಮೀಣ ಮತ್ತು ವಿದ್ಯಾರ್ಥಿ ವ್ಯವಸ್ಥೆಯಿಂದ ಉದಯೋನ್ಮುಖ ಉನ್ನತ-ಸಾಮರ್ಥ್ಯದ ಸ್ಟಾರ್ಟಪ್‌ಗಳಿಗೆ ಜಾಗತಿಕ ಬಂಡವಾಳವನ್ನು ಸಂಗ್ರಹಿಸುವ ಗುರಿ ಹೊಂದಿದೆ.
ಜುನಿಕಾರ್ನಿವಲ್ನ ಪ್ರಮುಖ ಅಂಶಗಳು
ಭಾರತದ ಯುವ ಗ್ರಾಮೀಣ ಸಂಶೋಧಖರು ಡಲ್ಲಾಸ್, ಆಸ್ಟಿನ್, ಸ್ಯಾನ್ ಮಾರ್ಕೋಸ್, ಮತ್ತು ಹೂಸ್ಟನ್‌ನ ಪ್ರಮುಖ ಆವಿಷ್ಕಾರ ಕೇಂದ್ರಗಳಿಗೆ ಭೇಟಿ ನೀಡಲಿದ್ದಾರೆ. ಯುಎಸ್‌ನ ಸ್ಟಾರ್ಟಪ್ ಇಕೋಸಿಸ್ಟಮ್‌ನ ನೇರ ಅನುಭವ ಪಡೆಯುವುದರ ಜೊತೆಗೆ ಅಂತರರಾಷ್ಟ್ರೀಯ ಪಾಲುದಾರಿಕೆ ರೂಪಿಸಲಿದ್ದಾರೆ. ಗ್ರಾಮೀಣ ಪ್ರದೇಶಗಳ ಸವಾಲುಗಳಿಗೆ ಪರಿಹಾರಗಳನ್ನು ಒದಗಿಸುವ ಆವಿಷ್ಕಾರಗಳನ್ನು ಜಾಗತಿಕ ವೇದಿಕೆಯಲ್ಲಿ ಪ್ರದರ್ಶಿಸುವ ಅವಕಾಶ.



















