ನವದೆಹಲಿ: ಜೂನ್ 25 ರಂದು ಸಂವಿಧಾನ್ ಹತ್ಯಾ ದಿವಸ್ (Samvidhaan Hatya Diwas) ಎಂದು ಆಚರಿಸುವ ಕೇಂದ್ರದ ನಿರ್ಧಾರಕ್ಕೆ ಕಾಂಗ್ರೆಸ್ ತಿರುಗೇಟು ನೀಡಿದೆ. ಕಾಂಗ್ರೆಸ್ (Congress) ಜೂನ್ 4 ಅನ್ನು “ಮೋದಿಮುಕ್ತಿ ದಿವಸ್” (ModiMukti Diwas)ಎಂದು ಆಚರಿಸಬೇಕು ಎಂದು ಹೇಳಿದೆ.
2024ರ ಲೋಕಸಭಾ ಚುನಾವಣೆಯ ಫಲಿತಾಂಶ ಜೂನ್ 4ರಂದು ಪ್ರಕಟವಾಗಿತ್ತು. ಈ ವೇಳೆ ಬಿಜೆಪಿ ಕೇವಲ 240 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿದ್ದು, ಸರಳ ಬಹುಮತಕ್ಕೆ 32 ಸ್ಥಾನಗಳ ಕೊರತೆ ಎದುರಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಎನ್‌ಡಿಎ ಮಿತ್ರಪಕ್ಷಗಳ ಬೆಂಬಲದೊಂದಿಗೆ ಸತತ ಮೂರನೇ ಬಾರಿ ಸರ್ಕಾರ ರಚಿಸಿದರು. ಇದನ್ನು ಮೋದಿ ಸೋಲು ಎಂದು ವಿರೋಧ ಪಕ್ಷಗಳು ಬಣ್ಣಿಸಿವೆ. ಹೀಗಾಗಿ ಈ ದಿನವನ್ನು ಮೋದಿ ಮುಕ್ತಿ ದಿನ ಆಚರಿಸಲು ನಿರ್ಧರಿಸಲಾಗುವುದು ಎಂದು ತಿರುಗೇಟು ಕೊಟ್ಟಿದೆ.

ಸಂವಿಧಾನ್ ಹತ್ಯಾ ದಿವಸ್ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಕೇಂದ್ರದ ಈ ನಡೆ ಹೆಡ್‌ಲೈನ್ ಹಪಾಹಪಿಯ ಕಸರತ್ತು ಎಂದು ಆರೋಪಿಸಿದ್ದಾರೆ. ಜೈವಿಕ ಅಲ್ಲದ ಪ್ರಧಾನ ಮಂತ್ರಿ ಬೂಟಾಟಿಕೆಯಲ್ಲಿ ಮತ್ತೊಂದು ಹೆಡ್ ಲೈನ್-ಹಪಾಹಪಿ ಕಸರತ್ತು. ಮೊದಲು ಹತ್ತು ವರ್ಷಗಳ ಕಾಲ ಅಘೋಷಿತ ತುರ್ತು ಪರಿಸ್ಥಿತಿ ಹೇರಿದ್ದ ಅವರಿಗೆ 2024 ಜೂನ್ 4ರಂದು ಭಾರತದ ಜನರು ನಿರ್ಣಾಯಕ ವೈಯಕ್ತಿಕ, ರಾಜಕೀಯ ಮತ್ತು ನೈತಿಕ ಸೋಲನ್ನು ನೀಡಿದ್ದಾರೆ. ಆ ದಿನವನ್ನು ಇತಿಹಾಸದಲ್ಲಿ ಮೋದಿ ಮುಕ್ತಿ ದಿವಸ್ ಎಂದು ನೆನಪಿಸಲಾಗುವುದು ಎಂದು ಬರೆದುಕೊಂಡಿದ್ದಾರೆ.

ಭಾರತದ ಸಂವಿಧಾನ ಮತ್ತು ಅದರ ತತ್ವಗಳು, ಮೌಲ್ಯಗಳು ಮತ್ತು ಸಂಸ್ಥೆಗಳನ್ನು ವ್ಯವಸ್ಥಿತ ದಾಳಿಗೆ ಒಳಪಡಿಸಿದ ಜೈವಿಕವಲ್ಲದ ಪ್ರಧಾನಿ. ಇವರು ಮನುಸ್ಮೃತಿಯಿಂದ ಸ್ಫೂರ್ತಿ ಪಡೆದಿಲ್ಲ ಎಂಬ ಕಾರಣಕ್ಕಾಗಿ 1949 ರ ನವೆಂಬರ್‌ನಲ್ಲಿ ಭಾರತದ ಸಂವಿಧಾನವನ್ನು ತಿರಸ್ಕರಿಸಿದ ಸೈದ್ಧಾಂತಿಕ ಪರಿವಾರದ ಜೈವಿಕವಲ್ಲದ ಪ್ರಧಾನಿ. ಜೈವಿಕವಲ್ಲದ ಪ್ರಧಾನಿಯಾಗಿದ್ದು, ಅವರಿಗೆ ಪ್ರಜಾಪ್ರಭುತ್ವ ಎಂದರೆ ಡೆಮೊ-ಕುರ್ಸಿ ಮಾತ್ರ ಎಂದು ಜೈರಾಮ್ ರಮೇಶ್ ಬರೆದುಕೊಂಡಿದ್ದಾರೆ.
ತುರ್ತು ಪರಿಸ್ಥಿತಿ ಘೋಷಿಸಿದ ದಿನ ಅಂದರೆ ಜೂನ್ 25 ನ್ನು ಸಂವಿಧಾನ್ ಹತ್ಯಾ ದಿವಸ್ ಎಂದು ಆಚರಿಸಲಾಗುವುದು ಎಂದು ಕೇಂದ್ರ ಸರ್ಕಾರ ಇಂದು ಘೋಷಿಸಿದೆ. ಇದಕ್ಕೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ.