ಭೋಪಾಲ್: ಮಧ್ಯಪ್ರದೇಶದ ಶಹಡೋಲ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಜೂನಿಯರ್ ಡಿವಿಷನ್ ಸಿವಿಲ್ ನ್ಯಾಯಾಧೀಶೆ ಅದಿತಿ ಕುಮಾರ್ ಶರ್ಮಾ ಅವರ ರಾಜೀನಾಮೆಯು ನ್ಯಾಯಾಂಗ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ತಮ್ಮ ಹಿರಿಯ ನ್ಯಾಯಾಧೀಶರ ವಿರುದ್ಧದ ಕಿರುಕುಳ ಆರೋಪಗಳ ನಡುವೆಯೇ, ಅದೇ ಹಿರಿಯರನ್ನು ಹೈಕೋರ್ಟ್ ನ್ಯಾಯಾಧೀಶರಾಗಿ ನೇಮಕ ಮಾಡಿದ ಪ್ರಕ್ರಿಯೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ನ್ಯಾ.ಅದಿತಿ ರಾಜೀನಾಮೆ ಸಲ್ಲಿಸಿದ್ದಾರೆ. “ನಾನು ಸಂಸ್ಥೆಯನ್ನು ವಿಫಲಗೊಳಿಸಲಿಲ್ಲ, ಸಂಸ್ಥೆಯೇ ನನ್ನನ್ನು ವಿಫಲಗೊಳಿಸಿತು” ಎಂದು ತಮ್ಮ ರಾಜೀನಾಮೆ ಪತ್ರದಲ್ಲಿ ಭಾವುಕವಾಗಿ ಬರೆದಿರುವ ಅವರು, ನ್ಯಾಯಾಂಗ ವ್ಯವಸ್ಥೆಯ ಮೇಲಿನ ತಮ್ಮ ನಂಬಿಕೆಯನ್ನು ಪ್ರಶ್ನಿಸಿದ್ದಾರೆ. ಈ ಘಟನೆ ನ್ಯಾಯಾಲಯದ ಆಂತರಿಕ ಕಾರ್ಯವೈಖರಿ ಮತ್ತು ಉತ್ತರದಾಯಿತ್ವದ ಬಗ್ಗೆ ದೊಡ್ಡ ಚರ್ಚೆಗೆ ಕಾರಣವಾಗಿದೆ.
ಕಿರುಕುಳ ಆರೋಪ
ನ್ಯಾ.ಅದಿತಿ ಕುಮಾರ್ ಶರ್ಮಾ ಅವರು ತಮ್ಮ ಹಿರಿಯ ನ್ಯಾಯಾಧೀಶರ ವಿರುದ್ಧ “ಅನಿಯಂತ್ರಿತ ಅಧಿಕಾರ ಬಳಸಿ ಕಿರುಕುಳ ನೀಡಿದ್ದ” ಆರೋಪ ಮಾಡಿದ್ದರು. ಈ ಬಗ್ಗೆ ಅಗತ್ಯ ದಾಖಲೆಗಳೊಂದಿಗೆ ದೂರು ಸಲ್ಲಿಸಿದ್ದರೂ, ಯಾವುದೇ ಸೂಕ್ತ ತನಿಖೆ ಅಥವಾ ಕ್ರಮ ಕೈಗೊಳ್ಳದೆ, ಅದೇ ಆರೋಪಿ ಹಿರಿಯ ನ್ಯಾಯಾಧೀಶರನ್ನು ಮಧ್ಯಪ್ರದೇಶ ಹೈಕೋರ್ಟ್‌ನ ನ್ಯಾಯಾಧೀಶರಾಗಿ ನೇಮಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
“ನಾನು ನ್ಯಾಯಕ್ಕಾಗಿ ಧ್ವನಿ ಎತ್ತಿದ ನ್ಯಾಯಾಧೀಶೆ. ವರ್ಷಗಳ ಕಾಲ ಕಿರುಕುಳವನ್ನು ಅನುಭವಿಸಿದೆ. ಪ್ರತಿಯೊಂದು ಕಾನೂನು ಮಾರ್ಗವನ್ನೂ ಅನುಸರಿಸಿದೆ. ಆದರೆ, ಆರೋಪಿ ನ್ಯಾಯಾಧೀಶರನ್ನು ಪ್ರಶ್ನಿಸದೆ ಉನ್ನತ ಪದವಿಗೇರಿಸಲಾಯಿತು” ಎಂದು ಅವರು ತಮ್ಮ ಪತ್ರದಲ್ಲಿ ನೋವಿನಿಂದ ಬರೆದಿದ್ದಾರೆ. “ಯಾವುದೇ ತನಿಖೆ ಇಲ್ಲ, ನೋಟಿಸ್ ಇಲ್ಲ, ವಿಚಾರಣೆ ಇಲ್ಲ, ಉತ್ತರದಾಯಿತ್ವ ಇಲ್ಲ. ಇದು ನ್ಯಾಯದ ಹೆಸರಿನಲ್ಲಿ ನಡೆದ ಅನ್ಯಾಯ” ಎಂದು ನ್ಯಾ.ಅದಿತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಘಟನೆಗೆ ಒಂದು ಇತಿಹಾಸವಿದೆ. 2023ರಲ್ಲಿ ನ್ಯಾ.ಅದಿತಿ ಸೇರಿದಂತೆ ಆರು ಮಹಿಳಾ ನ್ಯಾಯಾಧೀಶರನ್ನು “ಅಸಮರ್ಪಕ ಕಾರ್ಯನಿರ್ವಹಣೆ” ಆರೋಪದಡಿ ಸೇವೆಯಿಂದ ವಜಾಗೊಳಿಸಲಾಗಿತ್ತು. ಈ ವಿಷಯವನ್ನು ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡು, ನಾಲ್ವರನ್ನು ಮರುನೇಮಕ ಮಾಡುವಂತೆ ಆದೇಶಿಸಿತು. ಆದರೆ, ನ್ಯಾ.ಅದಿತಿ ಮತ್ತು ಮತ್ತೊಬ್ಬರನ್ನು ಈ ಪಟ್ಟಿಯಿಂದ ಹೊರಗಿಡಲಾಗಿತ್ತು. ಇದರ ನಂತರ, ಫೆಬ್ರವರಿ 2024ರಲ್ಲಿ, ಸುಪ್ರೀಂ ಕೋರ್ಟ್ ನ್ಯಾ.ಅದಿತಿಯ ವಜಾವನ್ನು “ಅನ್ಯಾಯ ಮತ್ತು ಕಾನೂನುಬಾಹಿರ” ಎಂದು ತೀರ್ಪು ನೀಡಿ, ಅವರನ್ನು ಮರುನೇಮಿಸಿತು.
“ನ್ಯಾಯಾಲಯದ ಮೌನದ ಬಲಿಪಶು”
ತಮ್ಮ ಮೇಲೆ ಕಿರುಕುಳ ನೀಡಿದ ಹಿರಿಯ ನ್ಯಾಯಾಧೀಶರನ್ನು ಉನ್ನತ ಸ್ಥಾನಕ್ಕೆ ನೇಮಿಸಿದ ನಂತರ, ನ್ಯಾ.ಅದಿತಿ ಅವರು ತಮ್ಮನ್ನು “ನ್ಯಾಯಾಲಯದ ಮೌನದ ಬಲಿಪಶು” ಎಂದು ವರ್ಣಿಸಿಕೊಂಡಿದ್ದಾರೆ. “ಯಾವುದೇ ಪುನರ್ನೇಮಕ, ಪರಿಹಾರ ಅಥವಾ ಕ್ಷಮೆಯು ನನ್ನ ಗಾಯಗಳನ್ನು ಗುಣಪಡಿಸಲಾರದು. ಈ ಪತ್ರ ನ್ಯಾಯಾಲಯದ ದಾಖಲೆಗಳನ್ನು ಕಾಡಲಿ” ಎಂದು ಬರೆದು, ನ್ಯಾಯಾಂಗ ವ್ಯವಸ್ಥೆಗೆ ತಮ್ಮ ಅಸಮಾಧಾನದ ಸಂದೇಶ ರವಾನಿಸಿದ್ದಾರೆ.