ನವದೆಹಲಿ : ಭಾರತದ ಕೈಗಾರಿಕಾ ದೈತ್ಯ ಜೆಎಸ್‌ಡಬ್ಲ್ಯೂ (JSW), ಎಂಜಿ ಮೋಟಾರ್ಸ್ ನಂತರ ಈಗ ಸ್ವತಂತ್ರ ಬ್ರ್ಯಾಂಡ್ ಆಗಿ ವಾಹನ ಮಾರುಕಟ್ಟೆಗೆ ಪ್ರವೇಶಿಸಲು ಸಜ್ಜಾಗಿದೆ. ಚೀನಾ ಮೂಲದ ಚೇರಿ (Chery) ಕಂಪನಿಯೊಂದಿಗೆ ಕೈಜೋಡಿಸಿರುವ ಜೆಎಸ್‌ಡಬ್ಲ್ಯೂ, ಭಾರತದಲ್ಲಿ ಮೊದಲು ಬಿಡುಗಡೆ ಮಾಡಲಿರುವ ‘iCar V23’ ಎಲೆಕ್ಟ್ರಿಕ್ ಎಸ್‌ಯುವಿ ಈಗ ಸುರಕ್ಷತೆಯ ವಿಚಾರದಲ್ಲಿ ಜಗತ್ತಿನ ಗಮನ ಸೆಳೆದಿದೆ. ಇತ್ತೀಚೆಗೆ ನಡೆದ ಆಸಿಯಾನ್ ಎನ್‌ಸಿಎಪಿ (ASEAN NCAP) ಕ್ರ್ಯಾಶ್ ಟೆಸ್ಟ್‌ನಲ್ಲಿ ಈ ಎಸ್‌ಯುವಿ ಭರ್ಜರಿ 5-ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ.
ಆಸಿಯಾನ್ ಎನ್‌ಸಿಎಪಿ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ, iCar V23 ಎಸ್‌ಯುವಿಯನ್ನು ಮುಂಭಾಗ ಮತ್ತು ಪಾರ್ಶ್ವದ ಡಿಕ್ಕಿಯ ಪರೀಕ್ಷೆಗಳಿಗೆ ಒಳಪಡಿಸಲಾಗಿದೆ. ಮುಂಭಾಗದಿಂದ ಡಿಕ್ಕಿ: ಗಂಟೆಗೆ 64 ಕಿಮೀ ವೇಗದಲ್ಲಿ ಅಡೆತಡೆಗೆ ಡಿಕ್ಕಿ ಹೊಡೆಸಿದಾಗ, ಎಸ್‌ಯುವಿಯ ಮುಂಭಾಗದ ಬಂಪರ್ ಮತ್ತು ಬಾನೆಟ್ ಜಖಂಗೊಂಡರೂ, ವಾಹನದ ಮುಖ್ಯ ಪಿಲ್ಲರ್ (A-Pillar) ಮತ್ತು ಕ್ಯಾಬಿನ್ ಸುರಕ್ಷಿತವಾಗಿತ್ತು. ಗಾಜುಗಳು ಕೂಡ ಒಡೆಯದೆ ಹಾಗೆಯೇ ಇರುವುದು ವಾಹನದ ಗಟ್ಟಿತನಕ್ಕೆ ಸಾಕ್ಷಿಯಾಗಿದೆ.
ಪಕ್ಕದಿಂದ ವಾಹನಕ್ಕೆ ಡಿಕ್ಕಿ ಹೊಡೆಸಿದಾಗಲೂ ಬಾಗಿಲುಗಳು ಮತ್ತು ಪಿಲ್ಲರ್‌ಗಳು ಸವಾರರ ಮೇಲೆ ಒತ್ತಡ ಬೀಳದಂತೆ ತಡೆದಿವೆ. ಏರ್‌ಬ್ಯಾಗ್‌ಗಳು ಸರಿಯಾದ ಸಮಯಕ್ಕೆ ತೆರೆದುಕೊಂಡು ಜೀವಹಾನಿ ತಪ್ಪಿಸಿವೆ. ಈ ಎಸ್‌ಯುವಿ ಒಟ್ಟು 91.02 ಅಂಕಗಳನ್ನು ಗಳಿಸುವ ಮೂಲಕ ಸುರಕ್ಷತೆಯಲ್ಲಿ ಪೂರ್ಣ 5 ಸ್ಟಾರ್ ತನ್ನದಾಗಿಸಿಕೊಂಡಿದೆ.
ಹೈಟೆಕ್ ಸುರಕ್ಷತಾ ಫೀಚರ್ಸ್‌ಗಳು
ಕೇವಲ ಗಟ್ಟಿಯಾದ ಲೋಹ ಮಾತ್ರವಲ್ಲದೆ, ತಂತ್ರಜ್ಞಾನದ ಮೂಲಕವೂ ಸುರಕ್ಷತೆಯನ್ನು ಖಚಿತಪಡಿಸಲಾಗಿದೆ. ಇದರಲ್ಲಿ ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ (ADAS) ಮತ್ತು ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್ (AEB) ಸೌಲಭ್ಯವಿದ್ದು, ವಿವಿಧ ಹಂತದ ಪರೀಕ್ಷೆಗಳಲ್ಲಿ ಇದು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದೆ. ಭಾರತದಲ್ಲಿ ಬಿಡುಗಡೆಯಾಗುವಾಗಲೂ ಇದು ಭಾರತ್ ಎನ್‌ಸಿಎಪಿ (Bharat NCAP) ಟೆಸ್ಟ್‌ನಲ್ಲಿ 5 ಸ್ಟಾರ್ ಪಡೆಯುವ ನಿರೀಕ್ಷೆಯಿದೆ.
ಡಿಸೈನ್ ಮತ್ತು ಪರ್ಫಾರ್ಮೆನ್ಸ್ ಹೇಗಿದೆ?
iCar V23 ನೋಟದಲ್ಲಿ ಜೀಪ್ ರಾಂಗ್ಲರ್ ಮತ್ತು ಲ್ಯಾಂಡ್ ರೋವರ್ ಡಿಫೆಂಡರ್‌ನಂತಹ ಐಕಾನಿಕ್ ಎಸ್‌ಯುವಿಗಳನ್ನು ನೆನಪಿಸುತ್ತದೆ. ರೌಂಡ್ ಹೆಡ್‌ಲ್ಯಾಂಪ್‌ಗಳು ಮತ್ತು ಬಾಕ್ಸಿ ಲುಕ್ ಇದರ ವಿಶೇಷತೆ. ಒಳಾಂಗಣದಲ್ಲಿ 15.4 ಇಂಚಿನ ಬೃಹತ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ನೀಡಲಾಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದು 59.93 kWh ಮತ್ತು 81.76 kWh ಬ್ಯಾಟರಿ ಆಯ್ಕೆಗಳಲ್ಲಿ ಲಭ್ಯವಿದೆ. ಇದು ಒಂದು ಬಾರಿ ಚಾರ್ಜ್ ಮಾಡಿದರೆ ಸುಮಾರು 400 ರಿಂದ 550 ಕಿಮೀ ರೇಂಜ್ ನೀಡುವ ಸಾಮರ್ಥ್ಯ ಹೊಂದಿದೆ. ಇದರ ದೊಡ್ಡ ಬ್ಯಾಟರಿ ಮಾದರಿಯು ಆಲ್-ವೀಲ್ ಡ್ರೈವ್ (AWD) ಸೌಲಭ್ಯವನ್ನೂ ಹೊಂದಿದೆ. ಭಾರತದಲ್ಲಿ ಈಗಾಗಲೇ ಈ ಎಸ್‌ಯುವಿ ಪರೀಕ್ಷಾರ್ಥ ಸಂಚಾರ ನಡೆಸುತ್ತಿದ್ದು, ಶೀಘ್ರದಲ್ಲೇ ಜೆಎಸ್‌ಡಬ್ಲ್ಯೂ ಲೋಗೋದೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಸುರಕ್ಷತೆಗೆ ಮೊದಲ ಆದ್ಯತೆ ನೀಡುವ ಗ್ರಾಹಕರಿಗೆ ಇದೊಂದು ಭರವಸೆಯ ಎಲೆಕ್ಟ್ರಿಕ್ ಎಸ್‌ಯುವಿ ಆಗುವುದರಲ್ಲಿ ಸಂಶಯವಿಲ್ಲ.
ಇದನ್ನೂ ಓದಿ : ಅಭಿಷೇಕ್ ಶರ್ಮಾಗೆ ಫಾಫ್ ಡು ಪ್ಲೆಸಿಸ್ ‘ಮಾಸ್ಟರ್ ಕ್ಲಾಸ್’ ಸಲಹೆ



















