ಬ್ರೆಸಿಲಿಯಾ: ಬ್ರೆಜಿಲ್‌ನಲ್ಲಿ ನಡೆದ ಈ ಆಘಾತಕಾರಿ ಸುದ್ದಿಯ ಬಗ್ಗೆ ಕೇಳಿದರೆ ಯಾರಾದರೂ ಬೆಚ್ಚಿ ಬೀಳದೇ ಇರಲಾರರು. ಕಾಣೆಯಾಗಿದ್ದ 13 ವರ್ಷದ ಬಾಲಕಿಯೊಬ್ಬಳ ಬಗ್ಗೆ ವರದಿ ಮಾಡುತ್ತಿದ್ದ ಪತ್ರಕರ್ತರೊಬ್ಬರು, ತಮಗೆ ಗೊತ್ತೇ ಇಲ್ಲದಂತೆ ಆಕೆಯ ಶವದ ಮೇಲೆಯೇ ನಿಂತಿರುವುದು ವರದಿಯಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜಗತ್ತಿನಾದ್ಯಂತ ಜನರನ್ನು ಬೆಚ್ಚಿಬೀಳಿಸಿದೆ.
ಈ ಘಟನೆ ಈಶಾನ್ಯ ಬ್ರೆಜಿಲ್‌ನ ಬಕಾಬಲ್‌ನಲ್ಲಿರುವ ಮಿಯಾರಿಮ್ ನದಿಯಲ್ಲಿ ನಡೆದಿದೆ. ಪತ್ರಕರ್ತ ಲೆನಿಲ್ಡೊ ಫ್ರಜಾವೊ ಅವರು, ಕಾಣೆಯಾಗಿದ್ದ ರೈಸಾ ಎಂಬ ಬಾಲಕಿ ಕೊನೆಯದಾಗಿ ಈಜಲು ಹೋಗಿದ್ದ ಸ್ಥಳದ ಬಗ್ಗೆ ವರದಿ ಮಾಡಲು ನದಿಗಿಳಿದಿದ್ದರು. ನದಿಯ ಆಳ ಮತ್ತು ಅಪಾಯಕಾರಿ ಪರಿಸ್ಥಿತಿಯನ್ನು ವಿವರಿಸಲು ಅವರು ನೀರಿಗಿಳಿದು ಸಾಗುತ್ತಿದ್ದಾಗ, ಇದ್ದಕ್ಕಿದ್ದಂತೆ ನೀರಿನಲ್ಲಿ ಏನೋ ತಗುಲಿದ ಅನುಭವವಾಗಿ ಗಾಬರಿಯಿಂದ ಜಿಗಿದಿದ್ದಾರೆ.
“ನೀರಿನ ಕೆಳಗೆ ಏನೋ ಇದೆ ಎಂದು ನನಗನಿಸುತ್ತಿದೆ” ಎಂದು ಅವರು ತಮ್ಮ ತಂಡಕ್ಕೆ ಹೇಳಿ, ಭಯದಿಂದ ದಡದತ್ತ ಹೆಜ್ಜೆ ಹಾಕಿದ್ದಾರೆ. “ಇಲ್ಲ, ನಾನು ಹೋಗುವುದಿಲ್ಲ, ನನಗೆ ಭಯವಾಗುತ್ತಿದೆ. ಅದು ಕೈಯಂತೆ ಕಂಡಿತು, ಅದು ಆ ಬಾಲಕಿಯದ್ದೇ ಆಗಿರಬಹುದೇ? ಅಥವಾ ಮೀನೂ ಆಗಿರಬಹುದು. ನನಗೆ ಗೊತ್ತಿಲ್ಲ” ಎಂದು ಅವರು ಹೇಳಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ವಿಶೇಷವೆಂದರೆ, ಲೆನಿಲ್ಡೊ ಫ್ರಜಾವೊ ಅವರ ವರದಿಯ ನಂತರ, ಅಗ್ನಿಶಾಮಕ ದಳ ಮತ್ತು ಮುಳುಗುತಜ್ಞರ ತಂಡವು ಶೋಧ ಕಾರ್ಯಾಚರಣೆಯನ್ನು ಪುನರಾರಂಭಿಸಿತು. ಆಗ, ಪತ್ರಕರ್ತ ನಿಂತಿದ್ದ ಅದೇ ಜಾಗದಲ್ಲಿ ಬಾಲಕಿ ರೈಸಾಳ ಮೃತದೇಹ ಪತ್ತೆಯಾಗಿದೆ. ಇದನ್ನು ನೋಡಿ ಎಲ್ಲರೂ ಹೌಹಾರಿದ್ದಾರೆ.
ನಂತರ ನಡೆದ ಮರಣೋತ್ತರ ಪರೀಕ್ಷೆಯಲ್ಲಿ, ಬಾಲಕಿಯು ತನ್ನ ಸ್ನೇಹಿತರೊಂದಿಗೆ ಈಜುತ್ತಿದ್ದಾಗ ಆಕಸ್ಮಿಕವಾಗಿ ಮುಳುಗಿ ಮೃತಪಟ್ಟಿದ್ದಾಳೆ ಮತ್ತು ಆಕೆಯ ದೇಹದ ಮೇಲೆ ಯಾವುದೇ ಗಾಯದ ಗುರುತುಗಳಿಲ್ಲ ಎಂದು ದೃಢಪಟ್ಟಿದೆ.