ಲಖನೌ: ಉತ್ತರಪ್ರದೇಶದ ಸೀತಾಪುರದಲ್ಲಿ ಶನಿವಾರ ಲಖನೌ-ದೆಹಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ಥಳೀಯ ಪತ್ರಕರ್ತನೊಬ್ಬನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಭೀಕರವಾಗಿ ಹತ್ಯೆ ಮಾಡಿದ್ದಾರೆ. ಅಕ್ರಮವನ್ನು ಬಯಲು ಮಾಡಿದ ದ್ವೇಷಕ್ಕೆ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮೃತರನ್ನು ರಾಘವೇಂದ್ರ ಬಾಜಪೇಯಿ ಎಂದು ಗುರುತಿಸಲಾಗಿದ್ದು, ಅವರು ಉತ್ತರಪ್ರದೇಶದ ಹಿಂದಿ ದಿನಪತ್ರಿಕೆಯ ವರದಿಗಾರರು ಹಾಗೂ ಆರ್ಟಿಐ ಕಾರ್ಯಕರ್ತ.
ದುಷ್ಕರ್ಮಿಗಳು ಮೊದಲು ಬಾಜಪೇಯಿ ಅವರು ಪ್ರಯಾಣ ಮಾಡುತ್ತಿದ್ದ ಬೈಕ್‌ಗೆ ಕಾರಿನಲ್ಲಿ ಡಿಕ್ಕಿ ಹೊಡೆಸಿದ್ದಾರೆ. ಅವರು ಸಮತೋಲನ ತಪ್ಪಿ ಬಿದ್ದ ಬಳಿಕ ಮೂರು ಸುತ್ತು ಗುಂಡು ಹಾರಿಸಿದ್ದಾರೆ.
ಬಾಜಪೇಯಿ ಬಿದ್ದಿರುವ ಸ್ಥಿತಿಯನ್ನು ನೋಡಿ ಆರಂಭದಲ್ಲಿ ಅಪಘಾತ ಎಂದು ಎಂದು ನಂಬಲಾಗಿತ್ತು. ಸ್ಥಳೀಯರು ಪೊಲೀಸರ ನೆರವಿನಿಂದ ಅವರ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದರು. ಅಲ್ಲಿ ವೈದ್ಯರು ಪರಿಶೀಲನೆ ನಡೆಸಿದಾಗ ದೇಹದಲ್ಲಿ ಮೂರು ಗುಂಡು ಹೊಕ್ಕಿರುವುದು ಪತ್ತೆಯಾಗಿತ್ತು. ಈ ಬಗ್ಗೆ ಆಸ್ಪತ್ರೆ ಪೊಲೀಸರಿಗೆ ಮಾಹಿತಿ ಕೊಟ್ಟಿತ್ತು.
35 ವರ್ಷದ ರಾಘವೇಂದ್ರ ಬಾಜಪೇಯಿ ಅವರಿಗೆ ಶನಿವಾರ ಮಧ್ಯಾಹ್ನ ಒಬ್ಬರ ಫೋನ್ ಕರೆ ಬಂದಿತ್ತು. ಆ ಕಡೆಯಿಂದ ಮಾತನಾಡಿದ ವ್ಯಕ್ತಿ ಹೊರಟು ಬರುವಂತೆ ಕೋರಿದ್ದರು ಅಂತೆಯೇ ಹೊರಟವರು ಅವರು ಹೆದ್ದಾರಿಯಲ್ಲಿ ಹತ್ಯೆಯಾಗಿದ್ದಾರೆ.
ತನಿಖೆ ಪ್ರಗತಿಯಲ್ಲಿದೆ ಎಂದ ಪೊಲೀಸರು
ಈ ಪ್ರಕರಣದ ಹಿಂದೆ ಯಾವ ಕಾರಣಗಳಿವೆ ಎಂಬುದನ್ನು ಪೊಲೀಸರು ಇನ್ನೂ ನಿಖರವಾಗಿ ತಿಳಿದುಕೊಳ್ಳಿಲ್ಲ. ಇದುವರೆಗೆ ಯಾವುದೇ ಎಫ್ಐಆರ್ ದಾಖಲಾಗಿಲ್ಲ. ಹತ್ಯೆಯ ಕುರಿತು ಅಧಿಕೃತ ದೂರು ನೀಡುವುದುಕ್ಕೆ ಕಾಯುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣದ ತನಿಖೆಗೆ ನಾಲ್ಕು ಪೊಲೀಸ್ ತಂಡವನ್ನು ರಚಿಸಲಾಗಿದೆ. ಮಹೋಳಿ, ಇಮಲಿಯಾ ಮತ್ತು ಕೋಟ್ವಾಲಿ ಠಾಣೆಗಳ ಪೊಲೀಸರು ಮತ್ತು ವಿಶೇಷ ಕಾರ್ಯಪಡೆ (SOG) ತಂಡಗಳ ನೆರವಿನಿಂದ ತನಿಖೆ ಆರಂಭಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುವ ಭರವಸೆ ಪೊಲೀಸರು ನೀಡಿದ್ದಾರೆ.