ಕರಾಚಿ: ಇಂಗ್ಲೆಂಡ್ ಸೀಮಿತ ಓವರ್ ಕ್ರಿಕೆಟ್ ತಂಡದ ನಾಯಕ ಜಾಸ್ ಬಟ್ಲರ್(Jos Buttler) ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ದುರ್ಬಲ ಅಫಘಾನಿಸ್ತಾನ ವಿರುದ್ಧ ಸೋಲು ಹಾಗೂ ಬಚಾಂಪಿಯನ್ಸ್ ಟ್ರೋಫಿಯಲ್ಲಿ ತಂಡ ಲೀಗ್ ಹಂತದಿಂದಲೇ ಹೊರಬಿದ್ದ ಬೆನ್ನಲ್ಲೇ ಅವರು ಈ ನಿರ್ಧಾರ ಪ್ರಕಟಿಸಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಕ್ಕೂ ಮುನ್ನ, ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಬಟ್ಲರ್ ತಮ್ಮ ನಿವೃತ್ತಿ ಘೋಷಿಸಿದರು. ಶನಿವಾರ(ಮಾ.1) ರಂದು ನಡೆಯುವ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯ ಅವರಿಗೆ ನಾಯಕನಾಗಿ ಕೊನೆಯ ಪಂದ್ಯವಾಗಿದೆ.
‘ಇದು ನನ್ನ ಪಾಲಿಗೆ ಸೂಕ್ತ ನಿರ್ಧಾರವಾಗಿದೆ, ಇದು ತಂಡ ವಿಚಾರದಲ್ಲೂ ಅನಿವಾರ್ಯ ಕ್ರಮವಾಗಿದೆ. ಬೇರೊಬ್ಬರು ತಂಡವನ್ನು ಮುನ್ನಡೆಸಲು ಬರಬಹುದು ಮತ್ತು ತಂಡವನ್ನು ಪ್ರಶಸ್ತಿಗಳ ಉತ್ತುಂಗಕ್ಕೆ ಕೊಂಡೊಯ್ಯಲು ಕೋಚ್ ಬ್ರೆಂಡನ್ ಮೆಕಲಮ್ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಬಹುದು’ ಎಂದು ಬಟ್ಲರ್ ಶುಕ್ರವಾರ (ಫೆಬ್ರವರಿ 28) ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
2022 ರಲ್ಲಿ ಇಯಾನ್ ಮಾರ್ಗನ್ ನಿವೃತ್ತಿಯ ನಂತರ ಬಟ್ಲರ್ ಇಂಗ್ಲೆಂಡ್‌ನ ವೈಟ್-ಬಾಲ್ ತಂಡಗಳ ನಾಯಕತ್ವ ವಹಿಸಿದ್ದರು. ಅದೇ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ತಂಡ ಚಾಂಪಿಯನ್ ಆಗಿತ್ತು. ಆದರೆ ಆ ಬಳಿಕ ಇಂಗ್ಲೆಂಡ್ ಆಡಿದ ಎಲ್ಲ ಐಸಿಸಿ ಟೂರ್ನಿಯಲ್ಲಿಯೂ ಅತ್ಯಂತ ಕಳಪೆ ಪ್ರದರ್ಶನ ತೋರಿತ್ತು.
2023ರ ಏಕದಿನ ವಿಶ್ವಕಪ್‌ನಲ್ಲಿ ಗುಂಪು ಹಂತದಿಂದಲೇ ಹೊರಬಿದ್ದಿತ್ತು. ನಂತರ ಕಳೆದ ವರ್ಷ ನಡೆದಿದ್ದ ಟಿ20 ವಿಶ್ವಕಪ್‌ನಲ್ಲಿ ಸೆಮಿಯಲ್ಲಿ ಸೋಲು ಕಂಡಿತ್ತು. ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯಲ್ಲೂ ಕ್ರಿಕೆಟ್ ಶಿಶು ಅಫಘಾನಿಸ್ತಾನ ವಿರುದ್ಧವೂ ಸೋಲು ಕಂಡಿತ್ತು. ಬಟ್ಲರ್ ಬಳಿಕ ಇಂಗ್ಲೆಂಡ್ ತಂಡಕ್ಕೆ ಯಾರು ಸಾರಥಿಯಾಗಲಿದ್ದಾರೆ ಎನ್ನುವುದು ಇನ್ನಷ್ಟೇ ಖಚಿತವಾಗಬೇಕಿದೆ.