ಬರ್ಮಿಂಗ್‌ಹ್ಯಾಮ್: ಟೆಸ್ಟ್ ಕ್ರಿಕೆಟ್ ಪ್ರೇಮಿಗಳ ಹೃದಯ ಬಡಿತ ಹೆಚ್ಚಿಸುವ ಮಹತ್ವದ ಕದನಕ್ಕೆ ಕ್ಷಣಗಣನೆ ಆರಂಭವಾಗಿದೆ! ಲೀಡ್ಸ್‌ನಲ್ಲಿ ಭಾರತವನ್ನು ಮಣಿಸಿದ ನಂತರ, ಇಂಗ್ಲೆಂಡ್ ತಂಡ ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ಎರಡನೇ ಟೆಸ್ಟ್‌ಗೆ ಸಜ್ಜಾಗಿದೆ. ಈ ಪಂದ್ಯ ಕೇವಲ ಸರಣಿಯ ಭವಿಷ್ಯವನ್ನು ನಿರ್ಧರಿಸುವುದಷ್ಟೇ ಅಲ್ಲದೆ, ಇಂಗ್ಲೆಂಡ್‌ನ ಮಾಜಿ ನಾಯಕ ಜೋ ರೂಟ್ ಅವರಿಗೆ ಕ್ರಿಕೆಟ್ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯುವಂಥ ದಾಖಲೆ ನಿರ್ಮಿಸುವ ಅವಕಾಶವನ್ನು ತಂದೊಡ್ಡಿದೆ.
ರೂಟ್, ಭಾರತದ ‘ದಿ ವಾಲ್’ ರಾಹುಲ್ ದ್ರಾವಿಡ್ ಮತ್ತು ದಕ್ಷಿಣ ಆಫ್ರಿಕಾದ ಆಲ್‌ರೌಂಡ್ ದಂತಕಥೆ ಜಾಕ್ ಕಾಲಿಸ್ ಅವರ ಟೆಸ್ಟ್ ರನ್ ದಾಖಲೆಗಳನ್ನು ಮುರಿಯುವ ಸನಿಹದಲ್ಲಿದ್ದಾರೆ!
ಮೊದಲ ಟೆಸ್ಟ್‌ನಲ್ಲಿ ಅಜೇಯ ಅರ್ಧಶತಕ ಸೇರಿದಂತೆ 81 ರನ್ ಗಳಿಸಿದ್ದ ಜೋ ರೂಟ್, ಈಗ ಎರಡನೇ ಟೆಸ್ಟ್ ಪಂದ್ಯದಲ್ಲಿ ಕೇವಲ 202 ರನ್ ಗಳಿಸಿದರೆ, ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ರಾಹುಲ್ ದ್ರಾವಿಡ್ (13,288 ರನ್) ಮತ್ತು ಜಾಕ್ ಕಾಲಿಸ್ (13,289 ರನ್) ಇಬ್ಬರನ್ನೂ ಹಿಂದಿಕ್ಕಿ ಮೂರನೇ ಸ್ಥಾನಕ್ಕೇರಲಿದ್ದಾರೆ. ಪ್ರಸ್ತುತ, 13,087 ರನ್‌ಗಳೊಂದಿಗೆ ಐದನೇ ಸ್ಥಾನದಲ್ಲಿರುವ ರೂಟ್, ಈ ಮಹತ್ವದ ಮೈಲಿಗಲ್ಲನ್ನು ತಲುಪಲು ಉತ್ಸುಕರಾಗಿದ್ದಾರೆ.
ಇವರ ಮುಂದೆ ಇರುವುದು ಕೇವಲ ದಿಗ್ಗಜರಾದ ರಿಕಿ ಪಾಂಟಿಂಗ್ (13,378) ಮತ್ತು ಸಚಿನ್ ತೆಂಡೂಲ್ಕರ್ (15,921) ಮಾತ್ರ! ಎಡ್ಜ್‌ಬಾಸ್ಟನ್‌ನ ಮೈದಾನದಲ್ಲಿ ರೂಟ್ ಇತಿಹಾಸ ನಿರ್ಮಿಸುತ್ತಾರಾ ಎಂಬುದು ಕ್ರಿಕೆಟ್ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ.
ಲೀಡ್ಸ್ ಸೋಲಿನ ನಂತರ ಭಾರತದ ಪ್ರತಿಕಾರ:
ಮೊದಲ ಟೆಸ್ಟ್‌ನಲ್ಲಿ ಭಾರತ ತಂಡವು ಐದು ಶತಕಗಳನ್ನು ಗಳಿಸಿದ್ದರೂ, ಇಂಗ್ಲೆಂಡ್ ವಿರುದ್ಧ ಐದು ವಿಕೆಟ್‌ಗಳ ಅಚ್ಚರಿಯ ಸೋಲನ್ನು ಅನುಭವಿಸಿತು. 471 ರನ್ ಗಳಿಸಿದ್ದರೂ, ಇಂಗ್ಲೆಂಡ್‌ನ ಬ್ಯಾಟಿಂಗ್ ದಾಳಿಗೆ ಪ್ರಥಮ ಇನಿಂಗ್ಸ್‌ನಲ್ಲಿ ಕೇವಲ 6 ರನ್‌ಗಳ ಅಲ್ಪ ಮುನ್ನಡೆ ಪಡೆದಿತ್ತು. ದ್ವಿತೀಯ ಇನಿಂಗ್ಸ್‌ನಲ್ಲಿ ನೀಡಿದ 371 ರನ್‌ಗಳ ಸವಾಲನ್ನು ಇಂಗ್ಲೆಂಡ್ ಯಶಸ್ವಿಯಾಗಿ ಬೆನ್ನಟ್ಟಿತ್ತು.
ಈ ಸೋಲಿನ ಸೇಡು ತೀರಿಸಿಕೊಳ್ಳಲು ಭಾರತ ತಂಡ ಬಲವಾಗಿ ಸಜ್ಜಾಗಿದ್ದು, ಎಡ್ಜ್‌ಬಾಸ್ಟನ್ ಟೆಸ್ಟ್‌ನಲ್ಲಿ ರೂಟ್ ಅವರ ದಾಖಲೆ ದಾಹಕ್ಕೆ ಬ್ರೇಕ್ ಹಾಕಿ ಸರಣಿಯಲ್ಲಿ ಸಮಬಲ ಸಾಧಿಸುತ್ತಾರಾ? ಅಥವಾ ರೂಟ್ ತಮ್ಮ ದಾಖಲೆಯನ್ನು ಬರೆದು ಭಾರತಕ್ಕೆ ಮತ್ತೊಮ್ಮೆ ಶಾಕ್ ನೀಡುತ್ತಾರಾ? ಜುಲೈ 2 ರಿಂದ ಆರಂಭವಾಗುವ ಈ ರೋಚಕ ಪಂದ್ಯದಲ್ಲಿ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಗಲಿದೆ!

















