ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಪ್ರತಿಷ್ಠಿತ ಆಶಸ್ ಸರಣಿಯ ಅಂತಿಮ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಬ್ಯಾಟಿಂಗ್ ಬೆನ್ನೆಲುಬು ಜೋ ರೂಟ್ ಅಮೋಘ ಆಟವಾಡುತ್ತಿದ್ದಾರೆ. ಮೊದಲ ದಿನವೇ ಅರ್ಧಶತಕ ಸಿಡಿಸಿದ ಅವರು, ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಅರ್ಧಶತಕ ಗಳಿಸಿದವರ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಸರಿಗಟ್ಟಲು ಇನ್ನು ಕೇವಲ ಒಂದು ಹೆಜ್ಜೆ ಬಾಕಿ ಉಳಿದಿದ್ದಾರೆ.
ಸಿಡ್ನಿಯಲ್ಲಿ ಮೊದಲ ದಿನದಾಟದ ಅಂತ್ಯಕ್ಕೆ ಅಜೇಯ 72 ರನ್ ಗಳಿಸಿರುವ ಜೋ ರೂಟ್, ಟೆಸ್ಟ್ ಕ್ರಿಕೆಟ್ನಲ್ಲಿ ತಮ್ಮ 67ನೇ ಅರ್ಧಶತಕವನ್ನು ಪೂರೈಸಿದ್ದಾರೆ. ಈ ಮೂಲಕ ಟೆಸ್ಟ್ ಇತಿಹಾಸದಲ್ಲಿ ಅತಿ ಹೆಚ್ಚು ಅರ್ಧಶತಕ ಬಾರಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ಅವರು ದ್ವಿತೀಯ ಸ್ಥಾನಕ್ಕೆ ಏರಿದ್ದಾರೆ. ಪ್ರಸ್ತುತ ಸಚಿನ್ ತೆಂಡೂಲ್ಕರ್ 68 ಅರ್ಧಶತಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದು, ರೂಟ್ ಮತ್ತೊಂದು ಅರ್ಧಶತಕ ಸಿಡಿಸಿದರೆ ಸಚಿನ್ ದಾಖಲೆಯನ್ನು ಸರಿಗಟ್ಟಲಿದ್ದಾರೆ. ಸಚಿನ್ ತೆಂಡೂಲ್ಕರ್ ಅವರು 200 ಟೆಸ್ಟ್ ಪಂದ್ಯಗಳಲ್ಲಿ 68 ಅರ್ಧಶತಕ ಬಾರಿಸಿದ್ದರೆ, ರೂಟ್ ಕೇವಲ 163 ಟೆಸ್ಟ್ ಪಂದ್ಯಗಳಲ್ಲಿ 67 ಅರ್ಧಶತಕಗಳ ಮೈಲಿಗಲ್ಲು ತಲುಪಿದ್ದಾರೆ.
14,000 ರನ್ಗಳ ಬೃಹತ್ ಮೈಲಿಗಲ್ಲಿನತ್ತ ರೂಟ್
ಜೋ ರೂಟ್ ಈ ಪಂದ್ಯದಲ್ಲಿ ಕೇವಲ ಅರ್ಧಶತಕಗಳ ದಾಖಲೆಯ ಮೇಲೆ ಮಾತ್ರ ಕಣ್ಣಿಟ್ಟಿಲ್ಲ, ಬದಲಾಗಿ ಒಟ್ಟು ರನ್ಗಳ ವಿಚಾರದಲ್ಲೂ ಇತಿಹಾಸ ನಿರ್ಮಿಸಲು ಸಜ್ಜಾಗಿದ್ದಾರೆ. ಈ ಪಂದ್ಯದಲ್ಲಿ ಅವರು ಕನಿಷ್ಠ 151 ರನ್ ಗಳಿಸಿದರೆ, ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 14,000 ರನ್ಗಳ ಗಡಿ ದಾಟಿದ ವಿಶ್ವದ ಎರಡನೇ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಇಲ್ಲಿಯವರೆಗೆ ಭಾರತದ ಸಚಿನ್ ತೆಂಡೂಲ್ಕರ್ ಮಾತ್ರ ಈ ಬೃಹತ್ ಮೈಲಿಗಲ್ಲನ್ನು ದಾಟಿದ ಏಕೈಕ ಕ್ರಿಕೆಟಿಗರಾಗಿದ್ದಾರೆ.
ದಲ ದಿನವೇ ಹಿಡಿತ ಸಾಧಿಸಿದ ಇಂಗ್ಲೆಂಡ್
ಸಿಡ್ನಿಯಲ್ಲಿ ಆರಂಭವಾದ 2025-26ರ ಆಶಸ್ ಸರಣಿಯ ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆರಂಭಿಕ ಹಿನ್ನಡೆಯ ನಂತರ 4ನೇ ಕ್ರಮಾಂಕದಲ್ಲಿ ಕ್ರೀಸ್ಗೆ ಬಂದ ಜೋ ರೂಟ್, ಹ್ಯಾರಿ ಬ್ರೂಕ್ ಅವರೊಂದಿಗೆ ಸೇರಿ ಆಸ್ಟ್ರೇಲಿಯಾದ ವೇಗದ ದಾಳಿಯನ್ನು ದಿಟ್ಟವಾಗಿ ಎದುರಿಸಿದರು. ಇವರಿಬ್ಬರು 4ನೇ ವಿಕೆಟ್ಗೆ 192 ಎಸೆತಗಳಲ್ಲಿ 154 ರನ್ಗಳ ಅಮೂಲ್ಯ ಜೊತೆಯಾಟವಾಡಿದ್ದಾರೆ. ದಿನದಾಂತ್ಯಕ್ಕೆ ಹ್ಯಾರಿ ಬ್ರೂಕ್ 78 ರನ್ ಹಾಗೂ ಜೋ ರೂಟ್ 72 ರನ್ ಗಳಿಸಿ ಅಜೇಯರಾಗಿದ್ದು, ಇಂಗ್ಲೆಂಡ್ ತಂಡವು ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದೆ.
ಇದನ್ನೂ ಓದಿ: WPL 2026 | ಯುಪಿ ವಾರಿಯರ್ಜ್ ನೂತನ ಸಾರಥಿಯಾಗಿ ಮೆಗ್ ಲ್ಯಾನಿಂಗ್ ನೇಮಕ ; ವಿಶ್ವವಿಜೇತ ನಾಯಕಿಯ ಹೆಗಲಿಗೆ ತಂಡದ ಚುಕ್ಕಾಣಿ



















