ನವದೆಹಲಿ: ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ತಮಗೆ ನಿರಂತರವಾಗಿ ಬರುತ್ತಿರುವ ಜೀವ ಬೆದರಿಕೆಗಳ ಕುರಿತು ಇದೇ ಮೊದಲ ಬಾರಿಗೆ ಬಾಲಿವುಡ್(Bollywood News) ಸೂಪರ್ ಸ್ಟಾರ್ ಸಲ್ಮಾನ್ ಖಾನ್(Salman Khan) ಪ್ರತಿಕ್ರಿಯಿಸಿದ್ದಾರೆ. ತಮ್ಮ ಮುಂಬರುವ ಚಿತ್ರ ಸಿಕಂದರ್‌ನ ಪ್ರಚಾರ ಕಾರ್ಯಕ್ರಮದ ಸಂದರ್ಭದಲ್ಲಿ, ಅವರಿಗಿರುವ ಜೀವ ಬೆದರಿಕೆ ಕುರಿತು ಸುದ್ದಿಗಾರರು ಪ್ರಶ್ನಿಸಿದ್ದು, ಅದಕ್ಕೆ ಉತ್ತರಿಸಿರುವ ಸಲ್ಲು, “ಭಗವಾನ್, ಅಲ್ಲಾಹ್ ಸಬ್ ಉನ್‌ಪರ್ ಹೈ. ಜಿತ್ನಿ ಉಮರ್ ಲಿಖಿ ಹೈ, ಉತ್ನೀ ಲಿಖಿ ಹೈ. ಬಸ್ ಯಹೀ ಹೈ” (ಅಂದರೆ, “ಎಲ್ಲವೂ ಭಗವಂತ, ಅಲ್ಲಾಹನಿಗೆ ಬಿಟ್ಟಿದ್ದು. ಯಾರಿಗೆ ಎಷ್ಟು ಆಯಸ್ಸೆಂದು ಬರೆಯಲಾಗಿದೆಯೋ, ಅಷ್ಟೇ ಇರುತ್ತದೆ. ಅಷ್ಟೆ”) ಎಂದಿದ್ದಾರೆ.
ನಿರಂತರ ಬೆದರಿಕೆಗಳು ಮತ್ತು ಮುಂಬೈನಲ್ಲಿರುವ ಅವರ ಅಪಾರ್ಟ್ಮೆಂಟ್ ಬಳಿ ಗುಂಡಿನ ದಾಳಿ ನಡೆದ ಬಳಿಕ ಸಲ್ಮಾನ್ ಖಾನ್ ಅವರಿಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಇದರಿಂದಾಗಿ ತಾವು ಎದುರಿಸುತ್ತಿರುವ ಸವಾಲುಗಳ ಕುರಿತೂ 59 ವರ್ಷದ ಸಲ್ಲು ಮಾತನಾಡಿದ್ದಾರೆ. ಸಲ್ಮಾನ್ ಖಾನ್ ಅವರ ಈ ಪತ್ರಿಕಾಗೋಷ್ಠಿಗೂ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. “ಕೆಲವೊಮ್ಮೆ, ಹಲವು ಜನರೊಂದಿಗೆ (ಭದ್ರತಾ ಸಿಬ್ಬಂದಿ) ಸಂಚರಿಸುವುದೇ ಸಮಸ್ಯೆ ಎಂಬಂತೆ ಭಾಸವಾಗುತ್ತದೆ” ಎಂದೂ ಅವರು ಹೇಳಿದ್ದಾರೆ.

ಸಲ್ಲು ಕೊಲೆಗೆ ಯತ್ನ:
ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ ಬಾಂದ್ರಾದಲ್ಲಿರುವ ಸಲ್ಮಾನ್ ಖಾನ್ ಅವರ ಗ್ಯಾಲಕ್ಸಿ ಅಪಾರ್ಟ್ಮೆಂಟ್ ಹೊರಗೆ ಬೈಕ್‌ನಲ್ಲಿ ಬಂದಿದ್ದ ಇಬ್ಬರು ವ್ಯಕ್ತಿಗಳು ಹಲವು ಸುತ್ತು ಗುಂಡುಗಳನ್ನು ಹಾರಿಸಿದ್ದರು. ಸಲ್ಮಾನ್ ರನ್ನು ಬೆದರಿಸುವ ಉದ್ದೇಶದಿಂದ ಹಾಗೂ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ಸೂಚನೆಯ ಮೇರೆಗೆ ಈ ಗುಂಡಿನ ದಾಳಿ ನಡೆಸಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿತ್ತು. 1998ರ ಕೃಷ್ಣಮೃಗ ಬೇಟೆ ಪ್ರಕರಣದ ಆರೋಪ ಎದುರಿಸುತ್ತಿರುವ ಸಲ್ಮಾನ್ ಖಾನ್ ಮೇಲೆ ಲಾರೆನ್ಸ್ ಬಿಷ್ಣೋಯ್ ದ್ವೇಷ ಸಾಧಿಸುತ್ತಿದ್ದಾನೆ. ಬಿಷ್ಣೋಯಿ ಸಮುದಾಯವು ಕೃಷ್ಣಮೃಗಗಳನ್ನು ಪವಿತ್ರವೆಂದು ಪರಿಗಣಿಸುತ್ತದೆ. ಅದನ್ನು ಕೊಂದಿರುವ ಆರೋಪ ಸಲ್ಲು ವಿರುದ್ಧ ಇರುವ ಕಾರಣ, ಸಲ್ಮಾನ್‌ಗೆ ಬಿಷ್ಣೋಯ್ ನಿರಂತರವಾಗಿ ಕೊಲೆ ಬೆದರಿಕೆ ಹಾಕುತ್ತಲೇ ಇದ್ದಾನೆ. ಪ್ರಸ್ತುತ ಆತ ಗುಜರಾತ್ ಜೈಲಿನಲ್ಲಿದ್ದರೂ ಅಲ್ಲಿಂದಲೇ ತನ್ನ ಗ್ಯಾಂಗ್ ಮೂಲಕ ಕುಕೃತ್ಯಗಳನ್ನು ಎಸಗುತ್ತಿದ್ದಾನೆ.
ಇನ್ನು, ಇದೇ ಭಾನುವಾರ ಯುಗಾದಿ ಹಬ್ಬದ ದಿನದಂದು ಸಲ್ಮಾನ್ ಖಾನ್ ನಟನೆಯ ಸಿಕಂದರ್ ಚಿತ್ರ ಬಿಡುಗಡೆಗೆ ಸಜ್ಜಾಗಿದ್ದಾರೆ. ಎ.ಆರ್.ಮುರುಗದಾಸ್ ನಿರ್ದೇಶನದ ಈ ಚಿತ್ರದಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ, ಕಾಜಲ್ ಅಗರ್ವಾಲ್ ಮತ್ತು ಶರ್ಮನ್ ಜೋಶಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.