ಬೆಂಗಳೂರು : ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಒಡೆತನದ ಜಿಯೋ ಫೈನಾನ್ಸ್ ಕಂಪನಿ ಈಗ ಹೂಡಿಕೆದಾರರಿಗೆ ಹೊಸ ಯೋಜನೆ ಘೋಷಿಸಿದೆ. ಹೊಸ ಫಿಕ್ಸೆಡ್ ಡೆಪಾಸಿಟ್ ಯೋಜನೆಯನ್ನು ಜಿಯೋ ಫೈನಾನ್ಸ್ ಘೋಷಣೆ ಮಾಡಿದೆ. ಅದರಲ್ಲೂ, ಹೂಡಿಕೆ ಮೇಲೆ ಶೇ.8.15ರಷ್ಟು ಬಡ್ಡಿ ಘೋಷಣೆ ಮಾಡಿದ್ದು, ಇದು ಸಾರ್ವಜನಿಕ ವಲಯದ ಬ್ಯಾಂಕ್ ಗಳು ನೀಡುವ ಬಡ್ಡಿ ದರಕ್ಕಿಂತ ಜಾಸ್ತಿ ಇದೆ.
ಜಿಯೋ ಫೈನಾನ್ಸ್ ಆ್ಯಪ್ ನಲ್ಲಿ ಹೊಸ ಎಫ್ ಡಿ ಯೋಜನೆಯಲ್ಲಿ ಗ್ರಾಹಕರು ಹೂಡಿಕೆ ಮಾಡಬಹುದಾಗಿದೆ. ಆ್ಯಪ್ ಮೂಲಕವೇ ಕನಿಷ್ಠ 1 ಸಾವಿರ ರೂಪಾಯಿಯಿಂದ 3 ಕೋಟಿ ರೂಪಾಯಿವರೆಗೆ ಹೂಡಿಕೆ ಮಾಡಬಹುದು ಎಂದು ಕಂಪನಿ ತಿಳಿಸಿದೆ. ಜಿಯೋ ಫೈನಾನ್ಸ್ ಆ್ಯಪ್ ಇನ್ ಸ್ಟಾಲ್ ಮಾಡಿಕೊಂಡು, ಸಂಪೂರ್ಣವಾಗಿ ಡಿಜಿಟಲ್ ಕೆವೈಸಿ ಮೂಲಕವೇ ಹೂಡಿಕೆ ಮಾಡಬಹುದಾಗಿದೆ. ಕೆಲವೇ ನಿಮಿಷಗಳಲ್ಲಿ ಹೂಡಿಕೆ ಮಾಡುವ ಅವಕಾಶವಿದೆ. ಇದಕ್ಕೆ ಯಾವುದೇ ಭೌತಿಕ ದಾಖಲೆಗಳು ಇರುವುದಿಲ್ಲ ಎಂದು ಸಂಸ್ಥೆ ಮಾಹಿತಿ ನೀಡಿದೆ.
ಜಿಯೋ ಫೈನಾನ್ಸ್ ಸಂಸ್ಥೆಯು ಎಫ್ ಡಿ ಯೋಜನೆಗಾಗಿ ಹಲವು ಹಣಕಾಸು ಸಂಸ್ಥೆಗಳು, ಬ್ಯಾಂಕ್ ಗಳೊಂದಿಗೆ ಸಹಭಾಗಿತ್ವ ಮಾಡಿಕೊಂಡಿದೆ. ಯುನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್, ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್, ಶ್ರೀರಾಮ್ ಫೈನಾನ್ಸ್ ಸೇರಿ ಹಲವು ಸಂಸ್ಥೆಗಳ ಸಹಯೋಗದಲ್ಲಿ ಹೊಸದೊಂದು ಯೋಜನೆ ಘೋಷಣೆ ಮಾಡಿದೆ.
ಜಿಯೋ ಫೈನಾನ್ಸ್ ಆ್ಯಪ್ ನಲ್ಲಿ ಏನೇನಿದೆ?
ಜಿಯೋ ಫೈನಾನ್ಸ್ ಎಂಬುದು ರಿಲಯನ್ಸ್ ಗ್ರೂಪ್ ನ ಹಣಕಾಸು ವಿಭಾಗವಾಗಿದೆ. ಜಿಯೋ ಫೈನಾನ್ಸ್ ಆ್ಯಪ್ ನಲ್ಲಿ ಯುಪಿಐ ಸೇವೆಗಳು, ಡಿಜಿಟಲ್ ಬ್ಯಾಂಕಿಂಗ್, ಸಾಲ, ಉಳಿತಾಯ, ಹೂಡಿಕೆ, ವಿಮೆ ಹಾಗೂ ವೆಲ್ತ್ ಟ್ರ್ಯಾಕಿಂಗ್ ಸೌಲಭ್ಯಗಳು ಇವೆ. ಇವುಗಳ ಸಾಲಿಗೆ ಈಗ ಫಿಕ್ಸೆಡ್ ಡೆಪಾಸಿಟ್ ಕೂಡ ಇವೆ
ಗಮನಿಸಿ
ಜಿಯೋ ಫೈನಾನ್ಸ್ ಘೋಷಣೆ ಮಾಡಿರುವ ಹೊಸ ಎಫ್ ಡಿ ಕುರಿತು ಮಾಹಿತಿ ನೀಡುವ ದೃಷ್ಟಿಯಿಂದ ಮಾತ್ರ ಲೇಖನ ಪ್ರಕಟಿಸಲಾಗಿದೆ. ಇದು ಹೂಡಿಕೆಗೆ ಮಾಡಿರುವ ಶಿಫಾರಸು ಅಲ್ಲ. ಯಾವುದೇ ಮಾದರಿಯ ಹೂಡಿಕೆಗೂ ಮೊದಲು ತಜ್ಞರ ಸಲಹೆ-ಸೂಚನೆ ಪಡೆಯುವುದು ಕಡ್ಡಾಯವಾಗಿದೆ.
ಇದನ್ನೂ ಓದಿ : ಕಾಂಬೋಡಿಯಾದಲ್ಲಿ ಡಿಜಿಟಲ್ ಅರೆಸ್ಟ್ ಜಾಲ | ಅಸಲಿ ಪೊಲೀಸ್ ಠಾಣೆಯನ್ನೇ ಮೀರಿಸುವಂತಿದ್ದ ನಕಲಿ ಇಂಡಿಯನ್ ಪೊಲೀಸ್ ಸ್ಟೇಷನ್ ಸೀಜ್!


















