ಬೆಂಗಳೂರು: ಪ್ರತಿ ವರ್ಷ ಐಟಿ ರಿಟರ್ನ್ಸ್ ಸಲ್ಲಿಸುವುದು ಒಂದು ಸವಾಲಿನ ಪ್ರಕ್ರಿಯೆ. ಐಟಿಆರ್ ಗೆ ಬೇಕಾದ ದಾಖಲೆಗಳನ್ನು ಪೂರೈಸುವುದು, ಅದಕ್ಕಾಗಿ ಒಬ್ಬ ನುರಿತ ಚಾರ್ಟರ್ಡ್ ಅಕೌಂಟೆಂಟ್ ಬಳಿ ಹೋಗುವುದು, ಅವರಿಗೆ ಸಾವಿರಾರು ರೂಪಾಯಿ ಶುಲ್ಕ ಪಾವತಿಸುವುದು ಸೇರಿ ಹಲವು ಪ್ರಕ್ರಿಯೆಗಳು ಇರುತ್ತವೆ. ಇದನ್ನು ತಪ್ಪಿಸಬೇಕು, ಜನ ಸುಲಭವಾಗಿ ಐಟಿಆರ್ ಸಲ್ಲಿಸಬೇಕು ಎಂದು ಜಿಯೋ ಫೈನಾನ್ಶಿಯಲ್ ಸರ್ವಿಸಸ್ ಲಿಮಿಟೆಡ್ (JFSL) ಈಗ ಹೊಸ ಆ್ಯಪ್ ಅಭಿವೃದ್ಧಿಪಡಿಸಿದೆ. ಇದರ ಮೂಲಕ ಕೇವಲ 24 ರೂಪಾಯಿಗೆ ಜನ ಐಟಿಆರ್ ಸಲ್ಲಿಸಬಹುದಾಗಿದೆ.
ಜಿಯೋ ಫೈನಾನ್ಸ್ ಆ್ಯಪ್ ಮೂಲಕ ಈಗ ತೆರಿಗೆದಾರರು ಸುಲಭವಾಗಿ ಐಟಿಆರ್ ಸಲ್ಲಿಸಬಹುದಾಗಿದೆ. ಐಟಿಆರ್ ಪ್ಲಾನಿಂಗ್, ಫೈಲಿಂಗ್ ಮಾಡ್ಯೂಲ್ ಅನ್ನು ಜಿಯೋ ಫೈನಾನ್ಸ್ ಅಭಿವೃದ್ಧಿಪಡಿಸಿದೆ. ಈ ಆ್ಯಪ್ ಮೂಲಕ ತೆರಿಗೆದಾರರು ಸುಲಭವಾಗಿ ಐಟಿಆರ್ ಸಲ್ಲಿಕೆ ಮಾಡಬಹುದು ಎಂದು ಜಿಯೋ ಫೈನಾನ್ಶಿಯಲ್ ಸರ್ವಿಸಸ್ ಲಿಮಿಟೆಡ್ (JFSL) ಮಾಹಿತಿ ನೀಡಿದೆ.
ಜಿಯೋ ಫೈನಾನ್ಸ್ ಅಪ್ಲಿಕೇಶನ್ ನಲ್ಲಿ ಸ್ವಯಂ-ತೆರಿಗೆ ಫೈಲಿಂಗ್ ಮಾಡ್ಯೂಲ್ 24 ರೂ.ಗಳಿಂದ ಪ್ರಾರಂಭವಾಗುತ್ತದೆ ಮತ್ತು ತೆರಿಗೆ ತಜ್ಞರ ಸಹಾಯದಿಂದ ತೆರಿಗೆ ಫೈಲಿಂಗ್ ಸೌಲಭ್ಯವು 999 ರೂ.ಗಳಿಂದ ಪ್ರಾರಂಭವಾಗುತ್ತದೆ ಎಂದು ಕಂಪನಿ ತಿಳಿಸಿದೆ. ಆದಾಯ ತೆರಿಗೆ ಇಲಾಖೆಯು ಐಟಿಆರ್ ಸಲ್ಲಿಕೆಯ ಗಡುವನ್ನು ಸೆಪ್ಟೆಂಬರ್ 15ರವರೆಗೆ ವಿಸ್ತರಣೆ ಮಾಡಿದೆ. ಅಷ್ಟರೊಳಗೆ ಜನ ಐಟಿಆರ್ ಸಲ್ಲಿಸಬೇಕಾಗಿದೆ.
ಜಿಯೋ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಹಿತೇಶ್ ಸೇಥಿಯಾ ಅವರು ಈ ಆ್ಯಪ್ ಕುರಿತು ಮಾಹಿತಿ ನೀಡಿದ್ದಾರೆ. “ತೆರಿಗೆಗಳನ್ನು ಸಲ್ಲಿಸುವ ಗಡುವು ಸಮೀಪಿಸುತ್ತಿರುವುದರಿಂದ, ತೆರಿಗೆ ಫೈಲಿಂಗ್ ಗೆ ಸಂಬಂಧಿಸಿದ ಎಲ್ಲ ಸಂಕೀರ್ಣತೆಗಳನ್ನು ತೆಗೆದುಹಾಕುವ ಗುರಿ ಹೊಂದಿದ್ದೇವೆ. ಗ್ರಾಹಕರಿಗೆ ಪರಿಣಾಮಕಾರಿ ತೆರಿಗೆ ಯೋಜನಾ ಸೇವೆಗಳನ್ನು ಒದಗಿಸುವುದು ಅಷ್ಟೇ ಮುಖ್ಯ, ಇದರಿಂದ ಅವರು ಹಣಕಾಸು ವರ್ಷದುದ್ದಕ್ಕೂ ತಮ್ಮ ತೆರಿಗೆ ಹೊಣೆಗಾರಿಕೆಯನ್ನು ಉತ್ತಮವಾಗಿ ತಿಳಿದುಕೊಳ್ಳಬಹುದು ಎಂದು ಹೇಳಿದ್ದಾರೆ



















