ಮುಂಬೈ: ಜಿಯೋ ಬ್ಲ್ಯಾಕ್‌ರಾಕ್ ಅಸೆಟ್ ಮ್ಯಾನೇಜ್ಮೆಂಟ್ ಜುಲೈ 7 ರಂದು ಮೂರು ನಗದು ಅಥವಾ ಡೆಟ್ ಮ್ಯೂಚುವಲ್ ಫಂಡ್ ಯೋಜನೆಗಳಲ್ಲಿ 17,800 ಕೋಟಿ ರೂ.ಗಳನ್ನು ಸಂಗ್ರಹಿಸಿದೆ. ಜಿಯೋ ಬ್ಲಾಕ್‌ರಾಕ್ ನೈಟ್ ಫಂಡ್ , ಜಿಯೋ ಬ್ಲಾಕ್‌ರಾಕ್ ಲಿಕ್ವಿಡ್ ಫಂಡ್ ಮತ್ತು ಜಿಯೋ ಬ್ಲಾಕ್‌ರಾಕ್ ಮನಿ ಮಾರ್ಕೆಟ್ ಫಂಡ್ ಈ ಮೂರು ಯೋಜನೆಗಳಾಗಿವೆ.
ಜಿಯೋ ಬ್ಲ್ಯಾಕ್‌ರಾಕ್, ಮುಕೇಶ್ ಅಂಬಾನಿ ಅವರ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಭಾಗವಾದ ಜಿಯೋ ಫೈನಾನ್ಷಿಯಲ್ ಸರ್ವೀಸಸ್ ಮತ್ತು ಯುಎಸ್ ಮೂಲದ ಬ್ಲ್ಯಾಕ್‌ರಾಕ್ ನಡುವಿನ ಜಂಟಿ ಉದ್ಯಮವಾಗಿದೆ.
ಮೂರು ದಿನಗಳ ಕೊಡುಗೆಯಲ್ಲಿ 90 ಕ್ಕೂ ಹೆಚ್ಚು ಸಾಂಸ್ಥಿಕ ಹೂಡಿಕೆದಾರರಿಂದ ಮತ್ತು 67,000 ಕ್ಕೂ ಹೆಚ್ಚು ಚಿಲ್ಲರೆ ಹೂಡಿಕೆದಾರರಿಂದ ಹೂಡಿಕೆಗಳನ್ನು ಆಕರ್ಷಿಸಲಾಗಿದೆ.
ಜಿಯೋಬ್ಲಾಕ್ ರಾಕ್ ಅಸೆಟ್ ಮ್ಯಾನೇಜ್ಮೆಂಟ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಸಿದ್ ಸ್ವಾಮಿನಾಥನ್ ಮಾತನಾಡಿ, “ಸಾಂಸ್ಥಿಕ ಮತ್ತು ಚಿಲ್ಲರೆ ಹೂಡಿಕೆದಾರರಿಂದ ನಮ್ಮ ಮೊದಲ ಎನ್ಎಫ್ಒಗೆ ಹೆಚ್ಚಿನ ಪ್ರತಿಕ್ರಿಯೆ ದೊರೆತಿರುವುದ ಜಿಯೋ ಬ್ಲ್ಯಾಕ್‌ರಾಕ್ ಅಸೆಟ್ ಮ್ಯಾನೇಜ್ಮೆಂಟ್‌ನ ನವೀನ ಹೂಡಿಕೆ ತತ್ವ, ಅಪಾಯ ನಿರ್ವಹಣಾ ಸಾಮರ್ಥ್ಯಗಳು ಮತ್ತು ಡಿಜಿಟಲ್-ಮೊದಲ ವಿಧಾನಕ್ಕೆ ಪ್ರಬಲ ಅನುಮೋದನೆಯಾಗಿದೆ.
ಎಲ್ಲಾ ರೀತಿಯ ಹೂಡಿಕೆದಾರರನ್ನು ಪೂರೈಸುವ ಭಾರತದ ವಿಕಸನಗೊಳ್ಳುತ್ತಿರುವ ಹೂಡಿಕೆ ಕ್ಷೇತ್ರದಲ್ಲಿ ಪರಿವರ್ತಕ ಶಕ್ತಿಯಾಗುವ ನಮ್ಮ ಪ್ರಯಾಣಕ್ಕೆ ಇದು ಬಲವಾದ ಆರಂಭವಾಗಿದೆ” ಎಂದರು.
2025ರ ಜುಲೈ 2ರಂದು ಮುಕ್ತಾಯಗೊಂಡ ಎನ್ಎಫ್ಒ ಭಾರತದ ನಗದು, ಸಾಲ ನಿಧಿ ವಿಭಾಗದಲ್ಲಿ ಅತಿದೊಡ್ಡದಾಗಿದೆ.



















