ನವದೆಹಲಿ: ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) ಜಾರ್ಖಂಡ್ ನಲ್ಲಿ ಸೀಟು ಹಂಚಿಕೆಯ ಗೊಂದಲ ನಿವಾರಿಸಿಕೊಂಡಿದೆ.
81 ಸದಸ್ಯರ ಬಲದ ವಿಧಾನಸಭೆಯಲ್ಲಿ ಬಿಜೆಪಿ 68 ಸ್ಥಾನಗಳಲ್ಲಿ ಸ್ಪರ್ಧಿಸಲು ಮುಂದಾಗಿದೆ. ಅಲ್ಲದೇ, ಆಲ್ ಜಾರ್ಖಂಡ್ ಸ್ಟೂಡೆಂಟ್ಸ್ ಯೂನಿಯನ್ (ಎಜೆಎಸ್‌ಯು), ಜನತಾ ದಳ-ಯುನೈಟೆಡ್ (ಜೆಡಿಯು) ಮತ್ತು ಲೋಕ ಜನಶಕ್ತಿ ಪಕ್ಷ (ರಾಮವಿಲಾಸ್) ಜೊತೆ ಮೈತ್ರಿ ಮಾಡಿಕೊಂಡು ಕಣಕ್ಕೆ ಧುಮುಕಲು ಮುಂದಾಗಿದೆ.
ಅಸ್ಸಾಂ ಮುಖ್ಯಮಂತ್ರಿ ಮತ್ತು ಬಿಜೆಪಿಯ ಜಾರ್ಖಂಡ್ ಚುನಾವಣಾ ಸಹ-ಪ್ರಭಾರಿ ಹಿಮಂತ ಬಿಸ್ವಾ ಶರ್ಮಾ ಈ ಕುರಿತು ಮಾಹಿತಿ ನೀಡಿದ್ದು, ಎಜೆಎಸ್‌ಯು 10 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಜೆಡಿಯು ಎರಡು ಸ್ಥಾನಗಳಲ್ಲಿ ಮತ್ತು ಎಲ್ ಜೆಪಿ ಒಂದು ಸ್ಥಾನದಲ್ಲಿ ಸ್ಪರ್ಧಿಸಲಿದೆ. ಉಳಿದ ಸ್ಥಾನಗಳಲ್ಲಿ ಬಿಜೆಪಿ ಕಣಕ್ಕೆ ಇಳಿಯಲಿದೆ.
ಕೇಂದ್ರ ಕೃಷಿ ಸಚಿವ ಶಿವರಾಜ್ ಚೌಹಾಣ್ ಮತ್ತು ಜಾರ್ಖಂಡ್ ಬಿಜೆಪಿ ಮುಖ್ಯಸ್ಥ ಬಾಬುಲಾಲ್ ಮರಾಂಡಿ ಅವರಲ್ಲದೆ ಎಜೆಎಸ್‌ಯು ಮುಖ್ಯಸ್ಥ ಸುದೇಶ್ ಮಹ್ತೋ ಮತ್ತು ಇತರ ಪಕ್ಷದ ನಾಯಕರು ಉಪಸ್ಥಿತರಿದ್ದರು. ಜಾರ್ಖಂಡ್ ನಲ್ಲಿ ನವೆಂಬರ್ 13 ಮತ್ತು ನವೆಂಬರ್ 20 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮತಗಳ ಎಣಿಕೆ ನವೆಂಬರ್ 23 ರಂದು ಜರುಗಲಿದೆ.